ಕೆಎನ್ ಎನ್ ಸಿನಿಮಾ ಡೆಸ್ಕ್ : ಅಮಿತ್ ರಾವ್ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ‘ಯದ್ಭಾವಂ ತದ್ಭವತಿ’ ಸಿನಿಮಾದ ಮೊದಲ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇನ್ನೊಂದು ವಿಶೇಷವೆಂದರೆ, ಏಕ ವ್ಯಕ್ತಿ ಪ್ರದಾನ ಕಥಾಹಂದರದ ಈ ಸಿನಿಮಾದಲ್ಲಿ ಒಬ್ಬರೇ ಕಲಾವಿದ ಅಮಿತ್ ರಾವ್ ಮೂರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಈಗಾಗಲೇ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಭಾಗವಹಿಸಿರುವ ‘ಯದ್ಭಾವಂ ತದ್ಭವತಿ’ ಸಿನಿಮಾ ಇಲ್ಲಿಯವರೆಗೆ ವಿವಿಧ ವಿಭಾಗಗಳಲ್ಲಿ ಸುಮಾರು 54 ಕ್ಕೂ ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿದೆ.
ಮನುಷ್ಯನ ಮನಸ್ಸಿನಲ್ಲಿ ಇರುವ ಭಾವನೆಗಳು, ಯೋಚನೆಗಳು ಹೇಗೆ ಹೊರ ಜಗತ್ತಿನಲ್ಲಿ ಪ್ರತಿಬಿಂಬಿಸುತ್ತವೆ. ನಾವು ನೋಡುವ ರೀತಿಯಂತೆ, ಜಗತ್ತು ಕಾಣುತ್ತದೆ ಎಂಬ ವಿಷಯವನ್ನು ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯ ಮೂಲಕ ಈ ಸಿನಿಮಾದಲ್ಲಿ ತೆರೆಮೇಲೆ ಹೇಳಲಾಗಿದೆ ಎಂಬುದು ಚಿತ್ರತಂಡದ ಮಾತು.
ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಯದ್ಭಾವಂ ತದ್ಭವತಿ’ ಸಿನಿಮಾಕ್ಕೆ ರಾಕಿ ಸೋನು ಸಂಗೀತ, ಸುದೀಪ್ ಫ್ರೆಡ್ರಿಕ್ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿದೆ.
ಬ್ರಹ್ಮ ಸಿನಿಮಾ ಹಾಲಿಕ್ ಡಿಜಿಟಲ್ ಸ್ಟುಡಿಯೋಸ್’ ಬ್ಯಾನರಿನಲ್ಲಿ ಅಮಿತ್ ರಾವ್, ಮಂಜುನಾಥ ದೈವಜ್ಞ, ಆರ್. ಶ್ರೀನಿವಾಸ ಶೆಟ್ಟಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚನ್ನಪಟ್ಟಣ ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಮುಂದಿನ ಫೆಬ್ರವರಿ ವೇಳೆಗೆ ‘ಯದ್ಭಾವಂ ತದ್ಭವತಿ’ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.