ಮಂಡ್ಯ : ವಿಶ್ವ ಹಾಲು ದಿನಾಚರಣೆ ಅಂಗವಾಗಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು (ಮನ್ ಮುಲ್) ಮದ್ದೂರು ಉಪ ಕಛೇರಿ ವತಿಯಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ಸೋಮವಾರ ವಿತರಣೆ ಮಾಡಿತು.
ಮನ್ ಮುಲ್ ನಿರ್ದೇಶಕ ಹರೀಶ್ ಬಾಬು ಹಾಗೂ ಉಪ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗುಡ್ ಲೈಫ್ ಹಾಲು, ಸುವಾಸಿತ ಹಾಲಿನ ಬಾಟಲಿಗಳು, ರಸ್ಕ್, ಬಿಸ್ಕತ್, ಮೈಸೂರು ಪಾಕ್ ಸೇರಿದಂತೆ ಆಸ್ಪತ್ರೆಯ ವಿವಿಧ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ನಂದಿನಿ ಉತ್ಪನ್ನಗಳನ್ನು ವಿತರಿಸಿದರು.
ಇದೇ ವೇಳೆ ನಿರ್ದೇಶಕ ಹರೀಶ್ ಬಾಬು ಮಾತನಾಡಿ, ವಿಶ್ವ ಹಾಲು ದಿನಾಚರಣೆ ಅಂಗವಾಗಿ ಪ್ರತಿ ವರ್ಷವೂ ವೃದ್ಧರು, ರೋಗಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು ವಿತರಣೆ ಮಾಡುತ್ತಿದ್ದು, ಈ ಮೂಲಕ ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಧೋರಣೆ ಅನುಸರಿಸುತ್ತ ಬಂದಿದೆ.
2001ರಲ್ಲಿ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ ಜೂನ್ 1 ನ್ನು ವಿಶ್ವ ಕ್ಷೀರ ದಿನವಾಗಿ ಆಚರಿಸಲು ಆರಂಭಿಸಿತು. ಜಗತ್ತಿನ ಎಲ್ಲೆಡೆ ಆರೋಗ್ಯಕರ ಆಹಾರವಾದ ಹಾಲನ್ನು ಎಲ್ಲರಿಗೆ ದೊರೆಯುವಂತೆ ಮಾಡುವುದು, ಮಕ್ಕಳಿಗೆ ಅಪೌಷ್ಟಿಕತೆ ಉಂಟಾಗದಂತೆ ತಡೆಯಲು ಹಾಲು ಮತ್ತು ಡೈರಿ ಉತ್ಪನ್ನಗಳು ದೊರೆಯುವಂತೆ ಮಾಡುವ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ.
ಗ್ರಾಮೀಣ ಆರ್ಥಿಕತೆಯ ಎರಡು ಬೆನ್ನೆಲುಬುಗಳಲ್ಲಿ ಒಂದು ಕೃಷಿ ಆಗಿದ್ದರೆ, ಇನ್ನೊಂದು ಹೈನುಗಾರಿಕೆಯಾಗಿದೆ. ಮದ್ದೂರು ತಾಲೂಕಿನಲ್ಲಿ ಸುಮಾರು 18 ಸಾವಿರ ಮಂದಿ ತಮ್ಮ ದೈನಂದಿನ ಬದುಕಿಗೆ ಹೈನುಗಾರಿಕೆಯನ್ನು ಆಶ್ರಯಿಸಿಕೊಂಡಿದ್ದು, ಪ್ರತಿ ತಿಂಗಳು 20 ಕೋಟಿಗೂ ಹೆಚ್ಚು ಹಣ ಪಾವತಿ ಮಾಡುತ್ತಿದ್ದು, ಇದರಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಮದ್ದೂರು ತಾಲೂಕಿನಿಂದ ಪ್ರತಿನಿತ್ಯ 2.10 ಲಕ್ಷ ಲೀಟರ್ ಹಾಲು ಸರಬರಾಜು ಮಾಡುವ ಮೂಲಕ 2 ನೇ ಸ್ಥಾನದಲ್ಲಿದ್ದು, ಗುಣಮಟ್ಟದಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ. ಹೀಗಾಗಿ ರೈತರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಒಕ್ಕೂಟವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕರಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಉಪ ವ್ಯವಸ್ಥಾಪಕ ಡಾ.ಮಂಜೇಶ್ ಗೌಡ, ಸಹಾಯಕ ವ್ಯವಸ್ಥಾಪಕ ಹನುಮಂತು, ಡಾ.ಗೋವರ್ಧನ್, ಹೋನ್ನೇಶ್, ವಿಸ್ತರಣಾಧಿಕಾರಿಗಳಾದ ಮಂಜುನಾಥ್, ರತ್ನಮ್ಮ, ಸೌಮ್ಯ, ಅಪ್ಸದ್ ಮತ್ತಿತರರು ಇದ್ದರು.








