ಕೊಪ್ಪಳ : ನೀರಿನ ರಭಸಕ್ಕೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಟ್ಟಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಡ್ಯಾಂಗೆ ಭೇಟಿ ನೀಡಿ, ತ್ವರಿತವಾಗಿ ಹೊಸ ಗೇಟ್ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ಟಿಬಿ ಡ್ಯಾಂ ವೀಕ್ಷಣೆ ಬಳಿಕ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಟಿ ಬಿ ಡ್ಯಾಂನ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯವು 70 ವರ್ಷಗಳಷ್ಟು ಹಳೆಯದು. 2019 ರಲ್ಲಿ ಎಡದಂಡೆ ನಾಲೆ ಏರಿ ಒಡೆದು ಹಾನಿಯಾಗಿತ್ತು. ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ನೀರು ಪೋಲಾಗಿತ್ತು. 70 ವರ್ಷಗಳ ಇತಿಹಾಸದಲ್ಲಿ ಯಾವುದೇ ಗೇಟಿಗೆ ಹಾನಿಯಾಗಿಲ್ಲ. 33 ಗೇಟ್ ಗಳ ಪೈಕಿ ವರೆಗೂ ಯಾವುದೇ ಗೇಟ್ ಹಾನಿಯಾಗಿರಲಿಲ್ಲ. ಕಾಲಕಾಲಕ್ಕೆ ಬೋರ್ಡ್ ನವರು ಗೇಟ್ ಪರಿಶೀಲಿಸಬೇಕಾಗಿತ್ತು ಎಂದರು.
ಆಂಧ್ರ, ತೆಲಂಗಾಣದ ಸಚಿವರು, ಸಂಸದರು, ಶಾಸಕರು ಬಂದಿದ್ದಾರೆ. ರೈತರ ಬೆಳೆಗೆ ನೀರು ಉಳಿಸಿಕೊಡಲು ಪ್ರಯತ್ನ ನಡೆಯುತ್ತಿದೆ. ತ್ವರಿತವಾಗಿ ಹೊಸ ಗೇಟ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಮತ್ತೊಮ್ಮೆ ಜಲಾಶಯ ತುಂಬಿದ ಮೇಲೆ ಬಾಗಿನ ಅರ್ಪಿಸುತ್ತೇವೆ. ಕ್ರಸ್ಟ್ ಗೇಟ್ ಕಡಿತಗೊಂಡ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ಸದ್ಯ 35,000 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಜ್ಞರಿಂದ ಗೇಟ್ ಅಳವಡಿಕೆ ಕಾರ್ಯ ಶೀಘ್ರದಲ್ಲಿ ನಡೆಸಲಾಗುತ್ತದೆ. ಅಲ್ಲದೆ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ತ್ವರಿತವಾಗಿ ರೈತರಿಗೆ ಬೆಳೆಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಕನ್ನಯ್ಯ ನಾಯ್ಡು ಸಲಹೆ ಪಡೆದು ಗೇಟ್ ದುರಸ್ತಿ ಕಾರ್ಯ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.