ಶಿವಮೊಗ್ಗ: ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸಿಕೊಡುವಂತ ಕೆಲಸವನ್ನು ಸಾಗರ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಭಾಗದಲ್ಲಿ ಚರಕ ಮೂಲಕ ಗ್ರಾಮೋದ್ಯೋಗವನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಕೆಲಸ ಮಾಡಲಾಗುತ್ತಿದೆ ಎಂಬುದಾಗಿ ಬೆಂಗಳೂರಿನ ಇಕ್ರಾ ಸಂಸ್ಥೆಯ ಗಾಯತ್ರಿ.ಬಿ ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ಆವರಣದಲ್ಲಿನ ರಂಗಮಂದಿರದಲ್ಲಿ ಜೀವನ್ಮುಖಿ ಮತ್ತು ಚರಕ ಸಂಸ್ಥೆಯಿಂದ ಆಯೋಜಿಸಿದ್ದಂತ ಅವ್ವ ಮಹಾಸಂತೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಕೃಷಿಕರ ಪರವಾಗಿ ಅವ್ವ ಮಹಾಸಂತೆಯಲ್ಲಿ ಪಾಲ್ಗೊಂಡಿದ್ದೇನೆ. ಈಗಿನ ಬದಲಾದ ದಿನಗಳಲ್ಲಿ ಕೃಷಿಗೆ ವಿಷ ಉಣಿಸುವ ಕೆಲಸ ಮಾಡಲಾಗುತ್ತಿದೆ. ಅಧಿಕ ಇಳುವರಿಯ ಹಿಂದೆ ಬಿದ್ದು, ಭೂಮಿಗೆ ವಿಷ ಉಣಿಸುವಂತ ಕೆಲಸವಾಗುತ್ತಿದೆ ಎಂಬುದಾಗಿ ಕಳವಳ ವ್ಯಕ್ತ ಪಡಿಸಿದರು.
ಮಲೆನಾಡಿನಲ್ಲೂ ಕೃಷಿ ಸವಾಲಿನ ಕೆಲಸವಾಗಿದೆ. ಈ ಹಿಂದೆ ನಮ್ಮಲ್ಲಿ ಸಮೃದ್ಧವಾದಂತ ಭೂಮಿಯಿತ್ತು. ಆ ಭೂಮಿಯಲ್ಲಿ ಹೊಸ ಹೊಸ ಭತ್ತದ ತಳಿಗಳನ್ನ ನಾಟಿ ಮಾಡುವ ಮೂಲಕ, ಬೆಳೆಯನ್ನು ತೆಗೆಯಲಾಗುತ್ತಿತ್ತು. ಪ್ರಸ್ತುತದ ಕೃಷಿಯಲ್ಲಿ ವೈವಿಧ್ಯತೆ ದೂರವಾಗಿದ್ದು, ಕೃಷಿ ಅದೋಗತಿಯತ್ತ ಸಾಗುತ್ತಿದೆ ಎಂಬುದಾಗಿ ಹೇಳಿದರು.
ಇಂದಿನ ಅವ್ವ ಮಹಾಸಂತೆ ಕೃಷಿಗೆ ಉತ್ತೇಜನ ನೀಡುವಂತ ಕೆಲಸ ಮಾಡುತ್ತಿದೆ. ಎಲ್ಲೆಡೆ ಇಂತಹ ಮಹಾಸಂತೆಗಳು ನಡೆದು ಕೃಷಿಗೆ ಉತ್ತೇಜನ ನೀಡುವ ಕೆಲಸವಾಗಬೇಕು. ಆ ಮೂಲಕ ಭೂಮಿಗೆ ವಿಷ ಉಣಿಸುವಂತ ಕೆಲಸ ನಿಲ್ಲಬೇಕು. ನಮ್ಮ ಹಳೆಯ ತಲೆಮಾರಿನ ಭತ್ತದ ತಳಿಗಳು ಮತ್ತೆ ಮುಖ್ಯವಾಹಿನಿಗಳಿಗೆ ಬರುವಂತೆ ಆಗಲಿ ಎಂಬುದಾಗಿ ಆಶಯ ವ್ಯಕ್ತ ಪಡಿಸಿದರು.
ಸಾಗರ ನಗರಸಭೆಯ ಪೌರಾಯುಕ್ತ ಹೆಚ್.ಕೆ ನಾಗಪ್ಪ ಮಾತನಾಡಿ, ಕೇವಲ ಕನಸು ಕಂಡ ತಕ್ಷಣ ಗುರಿ ಸಾಧಿಸಲು ಆಗುವುದಿಲ್ಲ. ಕನಸಿನ ಜೊತೆಗೆ ಗುರಿಯನ್ನು ಸಾಧಿಸುವ ಛಲವಿದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಆ ಕೆಲಸವನ್ನು ಎಂ.ವಿ ಪ್ರತಿಭಾ ಮಾಡಿದ್ದಾರೆ. ಅವ್ವ ಮಹಾಸಂತೆಯ ಕಲ್ಪನೆ ಅದೇ ಆಗಿದೆ ಎಂದರು.
ಮಹಿಳೆಯರು ಸ್ವ-ಉದ್ಯೋಗಿಗಳಾಗಬೇಕು. ಆ ಮೂಲಕ ಅವರು ಉತ್ಪಾದಿಸುವಂತ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಕೆಲಸವಾಗಬೇಕು. ಅವರಲ್ಲಿ ಆರ್ಥಿಕ ಚೈತನ್ಯವನ್ನು ತುಂಬಿ, ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಅವರನ್ನು ಇನ್ನಷ್ಟು ಕ್ರಿಯಾಶೀವಾಗಿರುವಂತ ಕೆಲಸವನ್ನು ನಾವು, ನೀವೆಲ್ಲ ಮಾಡಬೇಕು ಎಂದು ಹೇಳಿದರು.
2000-2001ರಲ್ಲೇ ಏಕವ್ಯಕ್ತಿ ಪ್ರದರ್ಶನದ ಮೂಲಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ ಪ್ರತಿಭೆಯನ್ನು ಓರೆ ಹಚ್ಚಿ ಪ್ರದರ್ಶಿಸಿದಂತವರು ಎಂ.ವಿ ಪ್ರತಿಭಾ ಆಗಿದ್ದಾರೆ. ತುಂಬಾ ಕಷ್ಟಗಳನ್ನು ಅನುಭವಿಸಿ ಮೇಲೆದ್ದವರು. ತಾನು ಮಹಿಳೆಯಾಗಿ, ತನ್ನವರಂತೆ ಕಷ್ಟದಲ್ಲಿರುವವರಿಗೆ ಸ್ವ ಉದ್ಯೋಗದಂತ ಕೆಲಸದ ದಾರಿಯನ್ನು ತೋರಿಸಿಕೊಡುತ್ತಿದ್ದಾರೆ. ನಾನು ಪ್ರಸನ್ನ ಅವರನ್ನು ಈ ಹಿಂದೆ ಭೇಟಿಯಾಗಿದ್ದೆ. ಅವರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂಬ ನೋವು ತೋಡಿಕೊಂಡರು.
ಸಾಗರ ನಗರಸಭೆಯ ಆವರಣದಲ್ಲಿನ ಗಾಂಧಿ ಮೈದಾನದ ರಂಗಮಂದಿರ ವಿವಿಧ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಈ ಸ್ಥಳ ಮತ್ತಷ್ಟು ಚಟುವಟಿಕೆಗಳಿಗೆ ವೇದಿಕೆಯಾಗಲಿ ಎಂಬುದಾಗಿ ಆಶಿಸುವೆ ಎಂದರು.
ಈ ವೇಳೆಯಲ್ಲಿ ರಂಗಕರ್ಮಿ ಜೇಡಿಕುಣಿ ಮಂಜುನಾಥ್ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಜೀವನ್ಮುಖಿ ಸಂಸ್ಥೆಯಿಂದ ಕತೆ, ಕವನ, ಚಿತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರವನ್ನು ನೀಡಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ನೇಹ ಸಾಗರ ಸ್ವಸಹಾಯ ಮಂಡಳಿಯ ಚೂಡಾಮಣಿ ರಾಮಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಸ್ವಾಗತಿಸಿದರೇ, ಪ್ರತಿಭಾ ಎಂ.ವಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಜೀವನ್ಮುಖಿ ತಂಡದಿಂದ ಚೌಡಿಕೆ ಕುಣಿತ ಹಾಗೂ ಜಾನಪದ ಕಲಾತಂಡಗಳಿಂದ ಜಾನಪದ ಗೀತಗಾಯನ ಕಾರ್ಯಕ್ರಮವನ್ನು ಅವ್ವ ಮಹಾಸಂತೆಯಲ್ಲಿ ಭಾಗಿಯಾಗಿದ್ದವರಿಗೆ ಉಣಬಡಿಸಲಾಯಿತು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಬೆಂಗಳೂರಿಗರ ಗಮನಕ್ಕೆ : ‘ಕೃಷ್ಣ ಜನ್ಮಾಷ್ಟಮಿ’ ಪ್ರಯುಕ್ತ ‘ಇಸ್ಕಾನ್ ಟೆಂಪಲ್’ ಬಳಿ ಸಂಚಾರ ಮಾರ್ಗ ಬದಲಾವಣೆ