ಬೆಂಗಳೂರು : ‘ಮುಡಾ’ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಸದನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆಯಿತು. ಇದಾದ ಬಳಿಕ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ ಮುಡಾ ಹಗರಣದ ಬಗ್ಗೆ ಚರ್ಚಿಸಿದರೆ ಸಿಎಂ ಮರ್ಯಾದೆ ಹೋಗುತ್ತೆಂದು ಸದನದಲ್ಲಿ ಚರ್ಚೆಗೆ ಅವಕಾಶ ಕೊಡ್ತಿಲ್ಲ ಎಂದು ಕಿಡಿ ಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣದಲ್ಲಿ ಸರ್ಕಾರ ಹೆದರಿ ಓಡಿಹೋಗಿದೆ. ಕಾಂಗ್ರೆಸ್ ಸರ್ಕಾರ ಹೇಡಿಗಳಂತೆ ನಡೆದುಕೊಳ್ಳುತ್ತಿದೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು. ಮುಡಾದಲ್ಲಿ 14 ಸೈಟ್ ನ್ಯಾಯವಾಗಿ ತೆಗೆದುಕೊಂಡಿದ್ದೆ ಅಂತ ಸದನದಲ್ಲಿ ಸಿಎಂ ಸಿದ್ದರಾಮಯ್ಯನವರು ಹೇಳಬೇಕು ಬರಿ ಹೊರಗಡೆ ಹೇಳುವುದಲ್ಲ.
ದಲಿತರ ಜಾಗ ಲೂಟಿ ಹೊಡೆಯುವ ಕೆಲಸ ಆಗಿದೆ. ಸಿದ್ದರಾಮಯ್ಯ ಸಿಎಂ, ಡಿಸಿಎಂ ಆಗಿದ್ದಾಗ ಹಗರಣ ನಡೆದಿದೆ. ದಲಿತರ ಜಮೀನು ಲೂಟಿ ಹೊಡೆದು ಅನ್ಯಾಯ ಮಾಡಿದ್ದಾರೆ. ದಲಿತ ಸಮುದಾಯಕ್ಕೆ ಸಿಎಂ ಅನ್ಯಾಯ ಮಾಡಿದ್ದಾರೆ.ಇಂತಹ ಹಗರಣಗಳ ಬಗ್ಗೆ ಧ್ವನಿಯೆತ್ತಲು ಬಿಡುತ್ತಿಲ್ಲ.
ಸ್ಪೀಕರ್ ಪೀಠಕ್ಕೆ ಅಗೌರವ ತೋರುತ್ತಿದ್ದಾರೆ ಎಂದು ಕಿಡಿ ಕಾರಿದರು. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ. ಮುಡಾ ಹಗರಣದ ಬಗ್ಗೆ ಚರ್ಚಿಸಿದರೆ ಮರ್ಯಾದೆ ಹೋಗುತ್ತೆ. ಸಿಎಂ ಮರ್ಯಾದೆ ಹೋಗುತ್ತೆ ಎಂದು ಅವಕಾಶ ಕೊಡುತ್ತಿಲ್ಲ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದರು.