ಬೀದರ್ : ಬೀದರ್ ನಲ್ಲಿರುವ ಬ್ರಿಮ್ಸ್ ಆಸ್ಪತ್ರೆ ಸೂಪರ್ ವೈಸರ್ ನಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಹಿಳಾ ಆಯೋಗ ಅಧ್ಯಕ್ಷರ ಕಾಲಿಗೆರಗಿ ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದ ವೇಳೆ ಮಹಿಳೆ ತನಗೆ ಕಿರುಕುಳ ನೀಡಿರುವ ಬಗ್ಗೆ ದೂರು ನೀಡಿದ್ದಾರೆ.ಆರೋಪಿ ಪ್ರಕಾಶ್ ತನ್ನ ಮಾತು ಕೇಳದಿದ್ದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆಯನ್ನೂ ಹಾಕಿದ್ದಾಗಿ ತಿಳಿಸಿದ್ದಾರೆ. ಕೆಲಸ ಮಾಡಿದರೂ ಸಂಬಳ ನೀಡುತ್ತಿಲ್ಲ, ಹಾಜರಿ ಹಾಕುತ್ತಿಲ್ಲ ಎಂದಿದ್ದಾರೆ.
ನಾನು ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದರೆ, ಕಳೆದ ಒಂದು ವರ್ಷದಿಂದ ಬ್ರಿಮ್ಸ್ ಸೂಪರ್ ವೈಸರ್ ಪ್ರಕಾಶ ಮಾಳಗೆ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮಾತು ಕೇಳಬೇಕು ಇಲ್ಲವಾದರೆ ನೋಡಿಕೊಳ್ಳುತ್ತೇನೆ ಎಂದು ಹೆದರಿಸಿ ಹಾಜರಿ ಸಹ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಈ ಸಂಬಂಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಿಳಾ ಪೊಲೀಸ್ ಠಾಣೆ ಹಾಗೂ ನ್ಯೂ ಟೌನ್ ಠಾಣೆಗೆ ದೂರು ಕೊಟ್ಟರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ. ಬ್ರಿಮ್ಸ್ ನಿರ್ದೇಶಕರಿಗೂ ತಿಳಿಸಿರುವೆ. ಆದರೆ, ಏನೂ ಮಾಡಿಲ್ಲ. ಹೀಗಾಗಿ ಕಿರುಕುಳ ನಿಂತಿಲ್ಲ ಎಂದು ಹೇಳಿಕೊಂಡರು.ಲಕ್ಷ್ಮಿಯನ್ನು ಕೈಹಿಡಿದು ಮೇಲಕ್ಕೆತ್ತಿ ಸಂತೈಸಿದ ಡಾ. ನಾಗಲಕ್ಷ್ಮಿ ಚೌಧರಿ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಧೈರ್ಯದಿಂದ ಇರಬೇಕೆಂದು ಹೇಳಿದರು.