ನವದೆಹಲಿ: ವಿವಾಹವಾದ ನಂತರ ಮಹಿಳೆ ತನ್ನ ವೃತ್ತಿಜೀವನವನ್ನು ತ್ಯಾಗ ಮಾಡಿ, ಪತಿ ಹೋದಲ್ಲೆಲ್ಲಾ ಹೋಗಬೇಕು ಎಂಬ ನಿರೀಕ್ಷೆಯು ಹಳೇಯ ಕಾಲದ ಮತ್ತು ಪುರುಷಪ್ರಧಾನ ಆಲೋಚನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ. ಪತ್ನಿಯು ತನ್ನ ವೃತ್ತಿಯನ್ನು ಮುಂದುವರಿಸಲು ಪತಿಯೊಂದಿಗೆ ಹೋಗಲು ನಿರಾಕರಿಸುವುದನ್ನು “ಕ್ರೌರ್ಯ” ಅಥವಾ “ಪರಿತ್ಯಾಗ” (Desertion) ಎಂದು ಪರಿಗಣಿಸಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಗುಜರಾತ್ ಹೈಕೋರ್ಟ್ ಮತ್ತು ಕುಟುಂಬ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ವಿವಾಹವು ಒಬ್ಬ ಮಹಿಳೆಯ ಸ್ವಾಯತ್ತತೆ ಅಥವಾ ವೈಯಕ್ತಿಕ ಅಸ್ತಿತ್ವವನ್ನು ನಾಶಪಡಿಸುವುದಿಲ್ಲ ಎಂದು ಹೇಳಿದೆ.
ಸೇನಾ ಅಧಿಕಾರಿಯಾಗಿದ್ದ ಪತಿ ಕಾರ್ಗಿಲ್‌ಗೆ ವರ್ಗಾವಣೆಯಾದಾಗ, ದಂತವೈದ್ಯೆಯಾಗಿದ್ದ ಪತ್ನಿಯು ಅವರೊಂದಿಗೆ ಹೋಗಲು ನಿರಾಕರಿಸಿದ್ದರು. ಅಹಮದಾಬಾದ್‌ನಲ್ಲಿ ತಮ್ಮ ಕ್ಲಿನಿಕ್ ನಡೆಸಲು ಮತ್ತು ಮಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಅವರು ತಂದೆ-ತಾಯಿಯ ಮನೆಯಲ್ಲೇ ಉಳಿದುಕೊಂಡಿದ್ದರು. ಇದನ್ನು ‘ಕ್ರೌರ್ಯ’ ಎಂದು ಕೆಳಹಂತದ ನ್ಯಾಯಾಲಯಗಳು ಪರಿಗಣಿಸಿದ್ದವು.
ಪತ್ನಿ ತನ್ನ ವೃತ್ತಿ ಬಿಟ್ಟು ಪತಿಯನ್ನು ಅನುಸರಿಸಬೇಕು ಎಂಬ ನಿರೀಕ್ಷೆಯು “ಊಳಿಗಮಾನ್ಯ ಮನಸ್ಥಿತಿಯನ್ನು” ಬಿಂಬಿಸುತ್ತದೆ. 21ನೇ ಶತಮಾನದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಮಹಿಳೆಯನ್ನು ಕೇವಲ ಪತಿಯ ಮನೆಯ ಒಂದು ‘ಅಂಗ’ವಾಗಿ ನೋಡಬಾರದು ಎಂದು ಕೋರ್ಟ್ ಎಚ್ಚರಿಸಿದೆ.
“ಮದುವೆ ಎಂಬುದು ಮಹಿಳೆಯ ವ್ಯಕ್ತಿತ್ವವನ್ನು ಮರೆಮಾಡುವುದಿಲ್ಲ ಅಥವಾ ಪತಿಯ ಅಡಿಯಲ್ಲಿ ಅವಳ ಅಸ್ತಿತ್ವವನ್ನು ಹತ್ತಿಕ್ಕುವುದಿಲ್ಲ. ಪರಸ್ಪರರ ಆಕಾಂಕ್ಷೆಗಳನ್ನು ಗೌರವಿಸುವುದು ಇಬ್ಬರ ಜವಾಬ್ದಾರಿಯಾಗಿದೆ.”ಮಗುವಿನ ಉತ್ತಮ ಭವಿಷ್ಯ ಮತ್ತು ಶಿಕ್ಷಣಕ್ಕಾಗಿ ಪತ್ನಿ ಪ್ರತ್ಯೇಕವಾಗಿ ವಾಸಿಸುವುದನ್ನು ‘ವೈವಾಹಿಕ ದುರ್ನಡತೆ’ ಎಂದು ಕರೆಯಲು ಸಾಧ್ಯವಿಲ್ಲ.
ಪತಿಯು ಪತ್ನಿಯ ಮೇಲೆ ಪ್ರಾಬಲ್ಯ ಮತ್ತು ನಿಯಂತ್ರಣ ಸಾಧಿಸುವ ಧೋರಣೆ ಹೊಂದಿದ್ದಾರೆ ಎಂದು ಗಮನಿಸಿದ ಕೋರ್ಟ್, ಆಕೆಯ ಮೇಲಿದ್ದ ‘ಕ್ರೌರ್ಯ’ದ ಎಲ್ಲಾ ಆರೋಪಗಳನ್ನು ತೆಗೆದುಹಾಕಿದೆ.








