ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಕಿರಿಯ ಸಹೋದರ ಮೊಹಮ್ಮದ್ ಕೈಫ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಮದುವೆಯ ಸುಳ್ಳು ಭರವಸೆ ನೀಡಿ ತಮ್ಮನ್ನು ದಾರಿತಪ್ಪಿಸಿದ್ದಾರೆ ಮತ್ತು ಮದುವೆಯ ಪ್ರಸ್ತಾಪ ಬಂದಾಗ ತಮ್ಮಿಂದ ದೂರವಾಗಿದ್ದಾರೆ ಎಂದು ಯುವತಿಯೊಬ್ಬರು ಆರೋಪಿಸಿದ್ದಾರೆ.
ದೂರುದಾರರ ಪ್ರಕಾರ, ಇಮ್ರಾನ್ ಎಂಬ ಸಾಮಾನ್ಯ ಪರಿಚಿತ ವ್ಯಕ್ತಿಯ ಮೂಲಕ ಅವರು ಕೈಫ್ ಅವರನ್ನು ಭೇಟಿಯಾಗಿದ್ದರು. ಆರಂಭದಲ್ಲಿ ಸ್ನೇಹವಾಗಿ ಶುರುವಾದ ಇವರ ಸಂಬಂಧ, ಇನ್‌ಸ್ಟಾಗ್ರಾಮ್‌ನಲ್ಲಿನ ನಿರಂತರ ಸಂಭಾಷಣೆಯ ನಂತರ ಪ್ರೇಮಕ್ಕೆ ತಿರುಗಿತ್ತು. ಆದರೆ, ಮದುವೆಯ ವಿಷಯ ಪ್ರಸ್ತಾಪವಾದಾಗ ಪರಿಸ್ಥಿತಿ ಬದಲಾಯಿತು. ಕೈಫ್ ಸ್ಪಷ್ಟ ಉತ್ತರ ನೀಡದೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಲು ಶುರು ಮಾಡಿದರು ಮತ್ತು ಕ್ರಮೇಣ ಸಂಬಂಧದಿಂದ ಹಿಂದೆ ಸರಿದರು ಎಂದು ಯುವತಿ ಆರೋಪಿಸಿದ್ದಾರೆ.
ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟನೆ ಕೇಳಿದಾಗ, ನಿರ್ಧಾರ ತೆಗೆದುಕೊಳ್ಳಲು ಸಮಯ ಬೇಕೆಂದು ಕೈಫ್ ಕೇಳಿದ್ದರು. ಆದರೆ ಅದಾದ ನಂತರ ಇಬ್ಬರ ನಡುವಿನ ಸಂವಹನ ಸಂಪೂರ್ಣವಾಗಿ ಹದಗೆಟ್ಟಿದೆ. ಸರಿಯಾದ ಕಾರಣ ನೀಡದೆ ಸಂಬಂಧವನ್ನು ಕೊನೆಗೊಳಿಸುವ ಮೂಲಕ ಕೈಫ್ ತಮಗೆ ದ್ರೋಹ ಮಾಡಿದ್ದಾರೆ ಎಂದು ಯುವತಿ ದೂರಿದ್ದಾರೆ.








