ನವದೆಹಲಿ: ಸಾಮಾನ್ಯ ಶಸ್ತ್ರಚಿಕಿತ್ಸೆಯೊಂದರಲ್ಲಿ ನಡೆದ ಘೋರ ಯಡವಟ್ಟಿನಿಂದಾಗಿ 56 ವರ್ಷದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು (NCDRC) ಸಂತ್ರಸ್ತ ಕುಟುಂಬಕ್ಕೆ 2 ಕೋಟಿ ರೂಪಾಯಿ ಭಾರಿ ಪರಿಹಾರವನ್ನು ಘೋಷಿಸಿದೆ. ಮಹಿಳೆಗೆ ತೊಂದರೆ ಇದ್ದ ಬಲ ಕಿಡ್ನಿಯನ್ನು ತೆಗೆಯುವ ಬದಲಾಗಿ ವೈದ್ಯರು ಆರೋಗ್ಯವಾಗಿದ್ದ ಎಡ ಕಿಡ್ನಿಯನ್ನೇ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದರು.
ಇದು ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ಗಂಭೀರ ಸ್ವರೂಪದ ವೈದ್ಯಕೀಯ ನಿರ್ಲಕ್ಷ್ಯ ಎಂದು ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದೆ.
ಘಟನೆಯ ಹಿನ್ನೆಲೆ:
ಉತ್ತರ ಪ್ರದೇಶದ ಅಲಿಗಢದ ನಿವಾಸಿ ರೋಗಿ ಮಹಿಳೆಗೆ 2012ರ ಏಪ್ರಿಲ್‌ನಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅವರು ಸ್ಥಳೀಯ ಆಶೀರ್ವಾದ್ ನರ್ಸಿಂಗ್ ಹೋಮ್‌ನ ವೈದ್ಯರಾದ ಡಾ. ರಾಜೀವ್ ಲೋಚನ್ ಅವರ ಬಳಿ ತಪಾಸಣೆಗೆ ಒಳಗಾಗಿದ್ದರು. ತಪಾಸಣೆ ನಡೆಸಿದ ವೈದ್ಯರು, ಮಹಿಳೆಯ ಬಲ ಕಿಡ್ನಿಯಲ್ಲಿ ಮೂತ್ರದ ಶೇಖರಣೆಯಿಂದಾಗಿ ಊತ ಕಾಣಿಸಿಕೊಂಡಿದೆ (Hydronephrosis) ಎಂದು ಪತ್ತೆಹಚ್ಚಿ, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕೆಂದು ಸಲಹೆ ನೀಡಿದ್ದರು.
ವೈದ್ಯರ ಸಲಹೆಯಂತೆ 2012ರ ಮೇ 6 ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಶಸ್ತ್ರಚಿಕಿತ್ಸೆಯ ನಂತರವೂ ಮಹಿಳೆಯ ಆರೋಗ್ಯ ಸುಧಾರಿಸದೆ ಮತ್ತಷ್ಟು ಹದಗೆಟ್ಟಿತು. ಇದರಿಂದ ಅನುಮಾನಗೊಂಡು ಬೇರೆ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ (CT Scan) ಮಾಡಿಸಿದಾಗ ವೈದ್ಯರ ಘೋರ ಬೇಜವಾಬ್ದಾರಿತನ ಬೆಳಕಿಗೆ ಬಂದಿದೆ. ಬಾಧಿತವಾಗಿದ್ದ ಬಲ ಕಿಡ್ನಿ ದೇಹದಲ್ಲೇ ಇತ್ತು, ಆದರೆ ಯಾವುದೇ ಸಮಸ್ಯೆಯಿಲ್ಲದ ಆರೋಗ್ಯಕರ ಎಡ ಕಿಡ್ನಿಯನ್ನು ವೈದ್ಯರು ತೆಗೆದುಹಾಕಿದ್ದರು!
ಎರಡು ವರ್ಷಗಳ ನರಕಯಾತನೆ, ನಂತರ ಸಾವು:
ಆರೋಗ್ಯಕರ ಕಿಡ್ನಿ ಕಳೆದುಕೊಂಡು, ಕಾಯಿಲೆ ಇದ್ದ ಕಿಡ್ನಿಯೊಂದಿಗೇ ಬದುಕಬೇಕಾಗಿ ಬಂದ ಮಹಿಳೆ ನಿರಂತರ ಡಯಾಲಿಸಿಸ್‌ಗೆ ಒಳಗಾಗಬೇಕಾಯಿತು. ಸುಮಾರು ಎರಡು ವರ್ಷಗಳ ಕಾಲ ತೀವ್ರ ನರಕಯಾತನೆ ಅನುಭವಿಸಿದ ಅವರು, ಕೊನೆಗೆ ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟದ ಏರಿಕೆ (Hyperkalemia) ಮತ್ತು ಸಕ್ಕರೆ ಪ್ರಮಾಣದ ಕುಸಿತದಿಂದಾಗಿ (Hypoglycemia) ಸಾವನ್ನಪ್ಪಿದರು.
ವೈದ್ಯರ ವಿರುದ್ಧ ಕಾನೂನು ಕ್ರಮ:
ಲೈಸೆನ್ಸ್ ರದ್ದು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ವೈದ್ಯಕೀಯ ಮಂಡಳಿಯು ವೈದ್ಯರ ನಡೆಯನ್ನು ಖಂಡಿಸಿ, ಅವರ ನೋಂದಣಿಯನ್ನು 2 ವರ್ಷಗಳ ಕಾಲ ಅಮಾನತುಗೊಳಿಸಿತ್ತು. ಇದನ್ನು ಭಾರತೀಯ ವೈದ್ಯಕೀಯ ಮಂಡಳಿ (MCI) ಕೂಡ ಎತ್ತಿಹಿಡಿದಿತ್ತು.
ಕ್ರಿಮಿನಲ್ ಪ್ರಕರಣ: ವೈದ್ಯರ ವಿರುದ್ಧ ಐಪಿಸಿ ಸೆಕ್ಷನ್ 338 ರ ಅಡಿಯಲ್ಲಿ ನಿರ್ಲಕ್ಷ್ಯದ ಪ್ರಕರಣ ದಾಖಲಾಗಿತ್ತು. ವೈದ್ಯರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರೂ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿತ್ತು.
ಗ್ರಾಹಕ ನ್ಯಾಯಾಲಯದ ಆಕ್ರೋಶ:
ನಿವೃತ್ತ ನ್ಯಾಯಮೂರ್ತಿ ಎ.ಪಿ. ಶಾಹಿ ಮತ್ತು ಸದಸ್ಯ ಭರತ್‌ಕುಮಾರ್ ಪಾಂಡ್ಯ ಅವರಿದ್ದ ಪೀಠವು ಈ ತೀರ್ಪು ನೀಡಿದ್ದು, “ತಾಯಿಯನ್ನು ಕಳೆದುಕೊಂಡ ಮಕ್ಕಳ ದುಃಖ, ಪತ್ನಿಯನ್ನು ಕಳೆದುಕೊಂಡ ಪತಿಯ ನೋವನ್ನು ಯಾವುದರಿಂದಲೂ ತುಂಬಲು ಸಾಧ್ಯವಿಲ್ಲ. ಒಂದು ವೇಳೆ ಎಡ ಕಿಡ್ನಿ ಸುರಕ್ಷಿತವಾಗಿದ್ದಿದ್ದರೆ ಆಕೆ ಇನ್ನು ಹಲವು ವರ್ಷ ಬದುಕುತ್ತಿದ್ದರು. ಹೀಗಾಗಿ ಎದುರಾಳಿ ವೈದ್ಯರು ಈ ನಿರ್ಲಕ್ಷ್ಯಕ್ಕೆ ಭಾರಿ ದಂಡ ತೆರಬೇಕಾಗುತ್ತದೆ,” ಎಂದು ಆದೇಶಿಸಿದೆ.
ಸಂತ್ರಸ್ತರ ಪರವಾಗಿ ನ್ಯಾಯವಾದಿಗಳಾದ ಸುದರ್ಶನ್ ರಾಜನ್, ಸಂಭವ್ ಶರ್ಮಾ ಮತ್ತು ರಿಯಾ ಸೆತಿಯಾ ವಾದ ಮಂಡಿಸಿದ್ದರು.








