ಬೆಂಗಳೂರು : ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಇಂದು ವಿಚಾರಣೆ ನಡೆಸಿದ ಹೈಕೋರ್ಟ್ , ಭವಾನಿ ರೇವಣ್ಣ ಅವರು ಮೈಸೂರು, ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಪೊಲೀಸರ 85 ಪ್ರಶ್ನೆಗಳಿಗೆ ಭವಾನಿ ರೇವಣ್ಣ ಅವರು ಉತ್ತರಿಸಿದ್ದಾರೆ. ಹೀಗಾಗಿ ತನಿಖೆಗೆ ಸಹಕರಿಸಿಲ್ಲ ಎಂಬ ವಾದ ಒಪ್ಪಲಾಗುವುದಿಲ್ಲ. ಪೊಲೀಸರಿಗೆ ಬೇಕಾದಂತಹ ಉತ್ತರ ಕೊಡಬೇಕೆಂದಿಲ್ಲ. ಸಂತ್ರಸ್ತೆಗೆ ಊಟ ಬಟ್ಟೆ ಕೊಟ್ಟಿಲ್ಲವೆಂಬ ವಾದವನ್ನು ಒಪ್ಪಲಾಗುವುದಿಲ್ಲ ಕೋರ್ಟ್ ಹೇಳಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ; ಸಂತ್ರಸ್ತೆಯೊಬ್ಬರ ಅಪಹರಣದ ಆರೋಪಕ್ಕೆ ಗುರಿಯಾಗಿ ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ಮೇಲಿನ ಕಾಯ್ದಿರಿಸಿದ ಆದೇಶವನ್ನು ಹೈಕೋರ್ಟ್ ಇಂದು ಪ್ರಕಟಿಸಿದೆ.
ಏನಿದು ಪ್ರಕರಣ?
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.