ಬೆಂಗಳೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಜಾಕಾರರಿಂದ ಖರ್ಗೆ ತಾಯಿ, ಸಹೋದರಿ ಸುಟ್ಟು ಹೋದರೂ ಎಐಸಿಸಿ ಅಧ್ಯಕ್ಷ ಖರ್ಗೆ ಮೌನವಾಗಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ, ಇದೀಗ ಈ ಒಂದು ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ಮಾಡಿದ್ದು, ಹೌದು ರಜಾಕಾರರು ನಮ್ಮ ಮನೆಯನ್ನು ಸುಟ್ಟು ಹಾಕಿದ್ದರು. ಸುಟ್ಟಿದ್ದು ರಜಾಕಾರರು ಹೊರತು ಮುಸ್ಲಿಮರಲ್ಲ ಎಂದು ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಸಿಎಂ ಯೋಗಿಗೆ ಖರ್ಗೆ ಸಾಹೇಬರ ಇತಿಹಾಸ ಗೊತ್ತಿಲ್ಲ. ಹೌದು ರಜಾಕಾರರು ನಮ್ಮ ಮನೆಯನ್ನು ಸುಟ್ಟು ಹಾಕಿದ್ದರು. ಸುಟ್ಟಿದ್ದು ರಜಾಕಾರರು ಹೊರತು ಮುಸ್ಲಿಮರಲ್ಲ. ಮುಸ್ಲಿಂ ಸಮುದಾಯ ಸುಟ್ಟಿಲ್ಲ. ಬೇರೆ ಸಮುದಾಯದ ಕೆಲವರಿಂದ ಮೋಸವಾಗುತ್ತದೆ ಎಂದು ಆರೋಪಿಸಿ ಇಡೀ ಸಮುದಾಯವನ್ನೇ ದೂರಲು ಆಗುತ್ತಾ? ಎಂದು ಪ್ರಶ್ನಿಸಿದರು.
ಇಡೀ ಮುಸ್ಲಿಂ ಸಮುದಾಯವನ್ನೇ ದೂರಲು ಆಗುತ್ತಾ? ರಜಾಕಾರರ ದಾಳಿಯ ಬಗ್ಗೆ ಈಗ ಚರ್ಚೆ ಅಪ್ರಸ್ತುತ. ಮನೆ ಸುಟ್ಟಿರುವ ಬಗ್ಗೆ ಮಾತನಾಡುವ ನೀವು ದಲಿತರಿಗೆ ದೇಗುಲ ಪ್ರವೇಶ ಮಾಡಲು ಅನುಮತಿಸುತ್ತೀರಾ? ಬಿಜೆಪಿ ಆರ್ ಎಸ್ ಎಸ್ ಸಿದ್ದಾಂತಗಳಲ್ಲಿ ಮೊದಲು ಸಮಾನತೆ ತರಲಿ ಎಂದು ತಿರುಗೇಟು ನೀಡಿದರು.
ಬಿಜೆಪಿ ಅಪಾಯದಲ್ಲಿದ್ದರೆ ಹಿಂದೂಗಳು ಅಪಾಯದಲ್ಲಿದೆ ಎಂದು ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರುವವರು ಬಿಜೆಪಿಯವರೆ ಹೊರತು ಹಿಂದೂಗಳಲ್ಲ. ಬಿಜೆಪಿಯವರು ಅಪಾಯದಲ್ಲಿದ್ದಾಗ ಹಿಂದುಗಳ ಹೆಸರು ಬಳಸಿಕೊಳ್ಳುತ್ತಾರೆ ಎಂದು ಬೆಂಗಳೂರಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದು 11 ವರ್ಷವಾಗಿದೆ. ಚುನಾವಣೆ ಬಂದ ಮೇಲೆ ಮಾತ್ರ ಹಿಂದೂ ಕತ್ರೆ ಮೇಹೆ ಎಂದು ಹೇಳುತ್ತಾರೆ. ಆದರೆ ಬೇರೆ ಸಮಯದಲ್ಲಿ ಯಾವುದೇ ಕತ್ರೆ ಇರಲಿಲ್ಲವಾ? ಈ ಹಿಂದೆ ಅರಗ ಜ್ಞಾನೇಂದ್ರ ಖರ್ಗೆ ಕಪ್ಪಗಿದ್ದಾರೆ ಎಂದು ಹೇಳಿದ್ದರು. ಅರಗ ಜ್ಞಾನೇಂದ್ರ ಹೇಳಿಕೆ ನೀಡಿದಾಗ ಯಾರು ಮಾತಾಡಲಿಲ್ಲ ಎಂದು ಕಿಡಿ ಕಾರಿದರು.