ಬೆಂಗಳೂರು: ಬಿಜೆಪಿ- ಜೆಡಿಎಸ್ ಪಾದಯಾತ್ರೆ ಪರಿಣಾಮವಾಗಿ ಕಾಂಗ್ರೆಸ್ಸಿಗರಿಗೆ ಚಿಂತೆ ಆರಂಭವಾಗಿದೆ. ನಿದ್ರೆ ಬಾರದ ಸ್ಥಿತಿ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಮೈಸೂರು ಚಲೋ ಪಾದಯಾತ್ರೆಯು ಎರಡನೇ ದಿನವಾದ ಇಂದು ಸಂಜೆ ರಾಮನಗರಕ್ಕೆ ತಲುಪಿದ ಸಂದರ್ಭದಲ್ಲಿ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಗೂ ನಿದ್ರೆ ಬರುತ್ತಿಲ್ಲ. ಒಂದೆಡೆ ಮುಖ್ಯಮಂತ್ರಿಯವರಿಗೆ ಕುರ್ಚಿ ಕಳಕೊಳ್ಳುವ ಭಯದಿಂದ ನಿದ್ರೆ ಬರುತ್ತಿಲ್ಲ. ಡಿಸಿಎಂ ಅವರಿಗೆ ಖಾಲಿಯಾದ ಕುರ್ಚಿ ಮೇಲೆ ಕೂರುವ ಆಸೆಯಿಂದ ನಿದ್ರೆ ಬರುತ್ತಿಲ್ಲ ಎಂದು ವಿವರಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ನಮ್ಮ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವ ವರೆಗೂ ನಮ್ಮ ಹೋರಾಟದ ಕಿಚ್ಚು ಆರುವುದಿಲ್ಲ ಎಂದು ಅವರು ಸ್ಪಷ್ಟವಾಗಿ ನುಡಿದರು.
ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಲೂಟಿ ಮಾಡಿ, ಚುನಾವಣೆಗೆ ಹೆಂಡ ಖರೀದಿ ಮಾಡಿದ್ದನ್ನು ಕೇಳಿದ್ದೇವೆ. ಗಾಂಧಿ ಕುಟುಂಬಕ್ಕೆ ಕರ್ನಾಟಕದ ತೆರಿಗೆದಾರರ ಹಣವನ್ನು ಕಪ್ಪ ಕಾಣಿಕೆಯಾಗಿ ಕೊಡಲು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹವಣಿಸುತ್ತಿತ್ತು ಎಂದು ಅವರು ಟೀಕಿಸಿದರು.
ಅಧಿಕಾರಕ್ಕೆ ಬರಲು ಹೋರಾಟ, ಪಾದಯಾತ್ರೆ ಮಾಡುತ್ತಿಲ್ಲ…
ಅಧಿಕಾರಕ್ಕೆ ಬರಲು ನಾವು ಹೋರಾಟ, ಪಾದಯಾತ್ರೆ ಮಾಡುತ್ತಿಲ್ಲ. ಈ ನಾಡಿನ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಡಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಾಡಿನ ಆರೂವರೆ ಕೋಟಿ ಜನರ ಧ್ವನಿಯಾಗಿ, ಬಡವರು, ರೈತರು, ದೀನದಲಿತರ ಪರವಾಗಿ ರಾಜ್ಯದ ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸದನದಲ್ಲಿ ನಮ್ಮ ಪ್ರಶ್ನೆಗೆ ಉತ್ತರಿಸಲಾಗದೆ ಓಡಿ ಹೋದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಇದೀಗ ನಮ್ಮನ್ನೇ ಪ್ರಶ್ನಿಸುತ್ತಿದ್ದಾರೆ. ಮೈಸೂರಿನ ಲಕ್ಷಾಂತರ ಬಡವರು ಮುಡಾಕ್ಕೆ ನಿವೇಶನಕ್ಕೆ ಅರ್ಜಿ ಹಾಕಿ ಕಾಯುತ್ತಿದ್ದರು. ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ತಮ್ಮ ಕುಟುಂಬಕ್ಕೆ ಪಡೆದುಕೊಂಡಿದ್ದಾರೆ; ಅಲ್ಲದೆ ಸಾವಿರಾರು ಜನ ಆಪ್ತರಿಗೆ ಕೊಡಿಸಿದ್ದಾರೆ. ಇದು ಕನಿಷ್ಠ 5 ಸಾವಿರ ಕೋಟಿ ಮೊತ್ತದ ಹಗರಣ ಎಂದು ವಿವರಿಸಿದರು.
ಡಾ.ಅಂಬೇಡ್ಕರ್ ಅವರ ವಸತಿ ಯೋಜನೆಯಡಿ ಮನೆ ಕೊಡಲು ಈ ಸರಕಾರಕ್ಕೆ ಆಗುತ್ತಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಡವರು ಮನೆ ಕಳೆದುಕೊಂಡರೆ 5 ಲಕ್ಷ ರೂ. ಕೊಡುತ್ತಿದ್ದರು. ಬಡವರ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ಸರಕಾರ ಒಂದು ಲಕ್ಷ ಕೊಡಲೂ ಪರದಾಡುತ್ತಿದೆ ಎಂದು ಟೀಕಿಸಿದರು.
ಇಂಥ ಬಡವರ ವಿರೋಧಿ ಸರಕಾರ ಇದ್ದರೆಷ್ಟು? ಬಿದ್ದರೆಷ್ಟು ಎಂದು ಪ್ರಶ್ನಿಸಿದರು. ನಮ್ಮ ಹೋರಾಟದ ಕಿಚ್ಚು ದಿನೇದಿನೇ ಹೆಚ್ಚಾಗುತ್ತಿದೆ. ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಹೋರಾಟ ನಿರಂತರವಾಗಿ ಇರಬೇಕು ಎಂದು ಅವರು ತಿಳಿಸಿದರು. ಯಡಿಯೂರಪ್ಪ ಅವರು ಹಚ್ಚಿದ ಹೋರಾಟದ ಕಿಚ್ಚು ರಾಜ್ಯದ ಕಾಂಗ್ರೆಸ್ ಸರಕಾರದ ಪತನಕ್ಕೆ ಕಾರಣ ಆಗಲಿದೆ ಎಂದು ಅವರು ನುಡಿದರು.
ಮುಖ್ಯಮಂತ್ರಿ ಗಾದಿ ಕೈಯಿಂದ ಜಾರುತ್ತಿದೆ..
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನೇ ಭಂಡತನ ಮಾಡಿದರೂ ಅವರ ಮುಖ್ಯಮಂತ್ರಿ ಗಾದಿ ಕೈಯಿಂದ ಜಾರುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ನಿಮ್ಮ ಲೂಟಿ, ಭ್ರಷ್ಟಚಾರ ಸಂಬAಧ ರಾಜ್ಯದ ಜನತೆಗೆ ಉತ್ತರಿಸಬೇಕಾದ ಸಂದರ್ಭ ಬಂದಿದೆ. ಸಚಿವ ನಾಗೇಂದ್ರ ಅವರು ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಹಗರಣಗಳ ಕಾರಣ ಸ್ವತಃ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಸಂದರ್ಭ ಈಗ ಒದಗಿಬಂದಿದೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎರಡೂ ಪಕ್ಷಗಳ ಮುಖಂಡರಾದ ಭೋಜೇಗೌಡ, ಬೈರತಿ ಬಸವರಾಜ್, ಅನ್ನದಾನಿ, ಅರವಿಂದ ಬೆಲ್ಲದ, ಕುಡಚಿ ರಾಜೀವ್, ಕೃಷ್ಣಪ್ಪ, ಸಿಮೆಂಟ್ ಮಂಜು, ನಾಡಗೌಡ, ಎಸ್.ಆರ್.ವಿಶ್ವನಾಥ್, ಆನಂದಸ್ವಾಮಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸಂಸದರು, ಶಾಸಕರು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಶೀಘ್ರದಲ್ಲೇ ‘ಲವ್ ಜಿಹಾದ್’ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನು ಜಾರಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ