ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ವಿರೋಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಕ್ಕೆ ಗೃಹ ಸಚಿವ ಜಿ ಪರಮೇಶ್ವರ ತಿರುಗೇಟು ನೀಡಿದ್ದಾರೆ.ಯಾರನ್ನೇ ಆದರೂ ಏಕಾಏಕಿ ಬಂಧಿಸುವುದಿಲ್ಲ. ಅದಕ್ಕೆ ಪುರಾವೆಗಳು, ದೂರಿನಲ್ಲಿ ಏನು ಹೇಳಿರುತ್ತಾರೆ ಎಂಬುದೆಲ್ಲ ಮುಖ್ಯವಾಗುತ್ತವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಹೆಚ್ಡಿ ರೇವಣ್ಣರನ್ನು ಇನ್ನೂ ಯಾಕೆ ಬಂಧಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರನ್ನೇ ಆದರೂ ಏಕಾಏಕಿ ಬಂಧಿಸುವುದಿಲ್ಲ. ಅದಕ್ಕೆ ಪುರಾವೆಗಳು, ದೂರಿನಲ್ಲಿ ಏನು ಹೇಳಿರುತ್ತಾರೆ ಎಂಬುದೆಲ್ಲ ಮುಖ್ಯವಾಗುತ್ತವೆ. ಪ್ರಕರಣ ಯಾವ ಸೆಕ್ಷನ್ ಅಡಿಯಲ್ಲಿ ಬರುತ್ತದೆ? ಅದರಲ್ಲಿ ಬಂಧಿಸಲು ಅವಕಾಶ ಇದೆಯೇ? ಜಾಮೀನು ಪಡೆಯುವಂಥ ಪ್ರಕರಣವೇ? ಈ ಅಂಶಗಳನ್ನೆಲ್ಲ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ವಿದೇಶದಲ್ಲಿರೋ ಪ್ರಜ್ವಲ್ ಕರೆ ತರುವ ವಿಚಾರವಾಗಿ ಮಾತನಾಡಿ, ಎಸ್ಐಟಿ ಈಗಾಗಲೇ ನೊಟೀಸ್ ಜಾರಿ ಮಾಡಿದೆ. ಪ್ರಜ್ವಲ್ ವಿದೇಶಕ್ಕೆ ಹೋಗಿರುವ ಬಗ್ಗೆ ಎಲ್ಲ ಮಾಹಿತಿ ಇದೆ. ವಾಪಸ್ ಕರೆದುಕೊಂಡು ಬರಲು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಎಸ್ಐಟಿ ಮಾಡಲಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವೂ ಬೇಕಾಗಬಹುದು. ಅಥವಾ ಎಸ್ಐಟಿ ತಂಡದವರೇ ಕರೆದುಕೊಂಡು ಬರಬಹುದು ಎಂದರು.
ಅಪರಾಧ ದಂಡಸಂಹಿತೆಯ (CRPC) ಸೆಕ್ಷನ್ 41a ಅಡಿ ನೊಟೀಸ್ ಕೊಟ್ಟಿದ್ದಾರೆ. ಅದರಂತೆ, ಆರೋಪಿಗಳು 24 ಗಂಟೆಯ ಒಳಗೆ ಬಂದು ವಿಚಾರಣೆಗೆ ಹಾಜರಾಗಬೇಕು. ವಿಚಾರಣೆಗೆ ಹಾಜರಾಗದೇ ಹೋದರೆ ಎಸ್ಐಟಿ ತಂಡ ಮುಂದಿನ ಪ್ರಕ್ರಿಯೆ ಮಾಡಲಿದೆ. ನಾವು ಎಸ್ಐಟಿ ರಚನೆ ಮಾಡಿ ತನಿಖೆಗೆ ವಹಿಸಿದ್ದೇವೆ ಎಂದು ಅವರು ಹೇಳಿದರು.