ಬೆಂಗಳೂರು: ದೇಶದ ವಿಚಾರದಲ್ಲೂ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ಸಹಾಯ ಆಗುವಂತೆ ಮಾತನಾಡುತ್ತಾರೆ. ಯಾಕೆ ಹೀಗೆ? ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮಗೆ ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಇದೆ. ನಾವು ಯಾವತ್ತೂ ನಮ್ಮ ಸೈನಿಕರ ಕುರಿತು ಅಪನಂಬಿಕೆ ವ್ಯಕ್ತಪಡಿಸಿಲ್ಲ. ಸೈನಿಕರ ಕ್ರೆಡಿಟ್ ಕಿತ್ತುಕೊಳ್ಳುವ ಕೆಲಸವನ್ನು ಯಾರೂ ಮಾಡಿಲ್ಲ; ಯುದ್ಧರಂಗಕ್ಕೆ ಹೋದವರು ಸೈನಿಕರೇ ಎಂದರು. ಕಾಂಗ್ರೆಸ್ಸಿನವರು ಹಿಂದೆ ಸರ್ಜಿಕಲ್ ಸ್ಟ್ರೈಕ್ ಆದಾಗ ಸಾಕ್ಷಿ ಕೇಳಿದ್ದೀರಲ್ಲವೇ ಎಂದು ಕೇಳಿದರು. ಆಗ ಸೈನಿಕರ ಕುರಿತು ಅಪನಂಬಿಕೆ ವ್ಯಕ್ತಪಡಿಸಿದ್ದೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಿಮಗೆ ಆಗ ಸೈನಿಕರ ಬಗ್ಗೆ ನಂಬಿಕೆ ಎಲ್ಲಿ ಹೋಗಿತ್ತು? ಎಂದರಲ್ಲದೆ, ನಾವು ನಮ್ಮ ಸೈನಿಕರನ್ನು ನಂಬುತ್ತೇವೆ; ಅವರ ಬಗ್ಗೆ ನಮಗೆ ಹೆಮ್ಮೆಯೂ ಇದೆ ಎಂದು ನುಡಿದರು.
1962ರ ಭಾರತ- ಚೀನಾ ಯುದ್ಧವನ್ನು ಹೊರತುಪಡಿಸಿ ಇನ್ಯಾವುದೇ ಯುದ್ಧದಲ್ಲಿ ನಮ್ಮ ಸೈನಿಕರು ಯುದ್ಧಭೂಮಿಯಲ್ಲಿ ಸೋತಿಲ್ಲ ಎಂದು ವಿವರಿಸಿದರು.
ಆಗ ಯುದ್ಧ ನಿಲ್ಲಿಸಿದ್ದೇಕೆ?
1948ರಲ್ಲಿ ಯುದ್ಧದ ವೇಳೆ ಕೇವಲ 48 ಗಂಟೆಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಕ್ಕೆ ಪಡೆಯುತ್ತೇವೆ ಎಂದು ಸೈನಿಕರು ಕೇಳಿದ್ದರು. ಯಾಕೆ ಆಗ ಯುದ್ಧ ನಿಲ್ಲಿಸಿದಿರಿ? ಪರಿಣಾಮ ಏನಾಯಿತು? ನಮ್ಮ ಕಾಶ್ಮೀರದ ಮೂರನೇ ಒಂದು ಭಾಗ ಪಾಕಿಸ್ತಾನದ ಕೈವಶವಾಯಿತು. ಇವತ್ತಿಗೂ ಪಾಕಿಸ್ತಾನದ ಕೈಯಲ್ಲೇ ಇದೆ. ಇದಕ್ಕೆ ಕಾರಣ ಯಾರು? ನಮ್ಮ ಸೈನಿಕರಲ್ಲ; ಆಗ, ಯುದ್ಧವಿರಾಮ ಬೇಡವೆಂದು ಜನರಲ್ ತಿಮ್ಮಯ್ಯನವರು ಹೇಳಿದ್ದರು; ಹಾಗೂ ಸಾಹಸ ಪ್ರದರ್ಶನ ಮಾಡಿದ್ದರು ಎಂದು ಸಿ.ಟಿ.ರವಿ ಅವರು ತಿಳಿಸಿದರು.
1965ರ ಯುದ್ಧದಲ್ಲಿ ನಮ್ಮ ಸೈನ್ಯ ಕರಾಚಿ, ಲಾಹೋರ್‍ವರೆಗೆ ಹೋಗಿತ್ತು. ಅದು ನಮಗೆ ಹೆಮ್ಮೆಯ ವಿಚಾರ. ತಾಷ್ಕೆಂಟ್ ಸಂಧಾನದ ಮೇಜಿನಲ್ಲಿ ನಾವು ಗೆದ್ದಿದ್ದನ್ನೆಲ್ಲ ಕಳಕೊಳ್ಳಬೇಕಾಯಿತು. ಅಷ್ಟು ಮಾತ್ರವಲ್ಲ; ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನೂ ಕಳಕೊಂಡೆವು ಎಂದು ಮಾಹಿತಿ ನೀಡಿದರು. ಪ್ರಧಾನಿಯ ಸಂಶಯಾಸ್ಪದ ಸಾವು ಆಗಿದ್ದರೂ ಮರಣೋತ್ತರ ಪರೀಕ್ಷೆಯೂ ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಫಲಾನುಭವಿ ಯಾರು? ಎಂದು ಕೇಳಿದರು.
ಕಾಂಗ್ರೆಸ್ಸಿಗರ ಹೇಳಿಕೆಯ ಧಾಟಿಯನ್ನು ಗಮನಿಸಿದರೆ, ಅವರು ಬಿಜೆಪಿ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಎಂದು ಭಾವಿಸಿದಂತೆ ಕಾಣುತ್ತಿದೆ. ಭಯೋತ್ಪಾದಕರು ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ. ರಾಜಕೀಯ ಪಕ್ಷಕ್ಕೆ ಮೀರಿ ಭಾರತದ ಸಾರ್ವಭೌಮತೆ, ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು, ಇಲ್ಲಿನ ಸರ್ವಧರ್ಮ, ಸಮಭಾವ, ಸಹಬಾಳ್ವೆಯನ್ನು ಪ್ರಶ್ನಿಸಿ ಹತ್ಯೆ ನಡೆಸಿದ್ದಾರೆ. ಈ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಟೀಕಿಸಿದರು.
ನಮ್ಮ 54 ಜನ ಸೈನಿಕರು ಏನಾದರು?
1971ರಲ್ಲಿ ಬಾಂಗ್ಲಾ ವಿಮೋಚನೆ ಆಯಿತು. 93 ಸಾವಿರ ಪಾಕಿಸ್ತಾನಿ ಸೈನಿಕರನ್ನು ನಮ್ಮ ಹೆಮ್ಮೆಯ ಸೈನಿಕರು ಸೆರೆ ಹಿಡಿದಿದ್ದರು. ಪ್ರಧಾನಿ, ರಕ್ಷಣಾ ಸಚಿವರು, ರಾಜಕೀಯ ನೇತಾರರು ಯುದ್ಧಭೂಮಿಗೆ ಹೋಗಿರಲಿಲ್ಲ. ಶಿಮ್ಲಾ ಒಪ್ಪಂದ ಆಗಿ ಬೇಷರತ್ತಾಗಿ ಬಿಡುಗಡೆ ಮಾಡಿದ್ದರು. ನಮ್ಮ 54 ಜನ ಸೈನಿಕರ ಬಿಡುಗಡೆ ಆಗಲಿಲ್ಲ. ಅವರು ಏನಾದರು? ಇವತ್ತಿಗೂ ಪತ್ತೆ ಇಲ್ಲ ಎಂದು ಸಿ.ಟಿ.ರವಿ ಅವರು ಕಳವಳ ವ್ಯಕ್ತಪಡಿಸಿದರು.
ಪಿಒಕೆ ವಾಪಸ್ ಸಿಗಲಿಲ್ಲ; ಎಲ್‍ಒಸಿ ಒಪ್ಪಬೇಕಾಯಿತು. ಸೈನಿಕರು ಗೆದ್ದಿದ್ದನ್ನು ಸಂಧಾನ ಮೇಜಿನಲ್ಲಿ ಸೋತದ್ದನ್ನು ಏನೆನ್ನಬೇಕು? ಯಾರು ಸೋತವರು? ಎಂದರು.
ಇನ್ನೊಂದೆರಡು ದಿನ ಹಣ್ಣುಗಾಯಿ ನೀರುಗಾಯಿ ಮಾಡಿ ಪಾಕಿಸ್ತಾನ ಇರುವವರೆಗೆ ಭಾರತದ ಕಡೆ ಕೆಂಗಣ್ಣಿನಿಂದ ನೋಡಬಾರದೆಂದು ನಮಗೂ ಅನಿಸಿತ್ತು. ನಾಯಿ ಬಾಲ ಡೊಂಕು. ಆ ಬಾಲವನ್ನೇ ಕತ್ತರಿಸಬೇಕೆಂದು ಅನಿಸಿತ್ತು. ಯುದ್ಧವೆಂದರೆ ಬಾಲಿವುಡ್ ಸಿನಿಮಾದಂತಲ್ಲ ಎಂದು ಸೇನಾಧಿಕಾರಿಗಳು ಉತ್ತರ ಕೊಟ್ಟರು. ಪ್ರಧಾನಿ, ರಾಷ್ಟ್ರಪತಿಗಳು ಸೇನೆಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಈಗ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಸ್ನೇಹಿತರೇ, ಮುಂಬೈನಲ್ಲಿ ದಾಳಿ ನಡೆಯಿತಲ್ಲವೇ? ನೀವು ಆಗ ಪ್ರತಿದಾಳಿಗೆ ಸೈನ್ಯಕ್ಕೆ ಸ್ವಾತಂತ್ರ್ಯ ನೀಡಿದ್ದೀರಾ? ಎಂದು ಕೇಳಿದರು.
ಹಲವು ಬಾರಿ ಭಯೋತ್ಪಾದಕ ದಾಳಿಗಳಾದಾಗ ನೀವು ಸೈನ್ಯಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದೀರಾ? ಕಲ್ಲು ಹೊಡೆದವರಿಗೆ ವಾಪಸ್ ಗುಂಡು ಹೊಡೆಯುವ ಅಧಿಕಾರವನ್ನೂ ನೀವು ಕೊಟ್ಟಿಲ್ಲವಲ್ಲ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಭಾರತಕ್ಕೆ, ಭಾರತದ ಧ್ವಜಕ್ಕೆ ಅಪಮಾನ ಮಾಡಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದರೂ ನಮ್ಮ ಸೈನಿಕರು ಅಪಮಾನ ಸಹಿಸಿಕೊಂಡಿರಬೇಕಿತ್ತು. ಇದೆಂಥ ದೋಸ್ತಿ ಎಂದು ಕೇಳಿದರು.
ಇಡೀ ದೇಶವು ಯುದ್ಧ ಮಾಡಬೇಕೆಂದು ಹೇಳುತ್ತಿದ್ದಾಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯುದ್ಧ ಬೇಡ, ಶಾಂತಿ ಬೇಕು ಎಂದಿದ್ದರು. ಇವರ ಹೇಳಿಕೆ ಪಾಕಿಸ್ತಾನದಲ್ಲಿ ಸಿದ್ದರಾಮಯ್ಯ ಸಾಹಬ್ ಐಸಾ ಕಹಾ ಎಂದು ಲೀಡ್ ಸುದ್ದಿಯಾಗಿತ್ತು. ಇದಕ್ಕೂ ಮುಂಚೆ ಪುಲ್ವಾಮಾದಲ್ಲಿ ನಮ್ಮ 58ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಆಗ, ಆ ಭಯೋತ್ಪಾದಕರ ದಾಳಿಯ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದ ಕಾಂಗ್ರೆಸ್ಸಿಗರು ಇದೊಂದು ಆಂತರಿಕ ಪಿತೂರಿ ಎಂಬಂತೆ ಮಾತನಾಡಿದ್ದರು ಎಂದು ಆಕ್ಷೇಪಿಸಿದರು. ಪಾಕಿಸ್ತಾನದವರು ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಇವರ ಮಾತುಗಳನ್ನೇ ಬಳಸಿದ್ದರು ಎಂದು ವಿವರಿಸಿದರು.
ಇನ್ಮುಂದೆ ಭಯೋತ್ಪಾದಕ ದಾಳಿ ಆದರೆ ಯುದ್ಧಕ್ಕೆ ಆಹ್ವಾನ ನೀಡಿದಂತೆ ಎಂದು ನಮ್ಮ ಪ್ರಧಾನಿ ಹೇಳಿದ್ದಾರೆ. ನೀವೇನು ಮಾಡಿದಿರಿ? ತಾನು ಭಯೋತ್ಪಾದಕ ಎಂದು ಬಿಬಿಸಿಯಲ್ಲಿ ಒಪ್ಪಿಕೊಂಡ ಯಾಸೀನ್ ಮಲಿಕ್ ಎಂಬುವವನನ್ನು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಪ್ರಧಾನಿ ತಮ್ಮ ಪಕ್ಕದಲ್ಲಿ ಕೂರಿಸಿ ಚಹಾ ನೀಡಿ, ಶೇಕ್ ಹ್ಯಾಂಡ್ ಮಾಡಿ ಫೋಟೊ ಬಿಡುಗಡೆ ಮಾಡಿ ಏನು ಸಂದೇಶ ಕೊಟ್ಟಿದ್ದೀರಿ? ಎಂದು ಕೇಳಿದರು. ಇಡೀ ದೇಶ ಯುದ್ಧ ಎನ್ನುವಾಗ ನೀವು ಬುದ್ಧ ಎಂದಿರಿ. ಈಗ ಬುದ್ಧ ಎನ್ನುವಾಗ ಯುದ್ಧ ಎನ್ನುತ್ತೀರಿ ಎಂದು ಆಕ್ಷೇಪಿಸಿದರು. ದೇಶದ ಹಿತಾಸಕ್ತಿ ವಿಷಯದಲ್ಲಿ ರಾಜಕಾರಣ ಮಾಡದಿರಿ ಎಂದು ಆಗ್ರಹಿಸಿದರು.
BREAKING : ಇನ್ಮುಂದೆ ಸರ್ಕಾರದಿಂದಲೇ ‘108 ಆಂಬುಲೆನ್ಸ್’ ಸೇವೆ : ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ
GOOD NEWS: ರಾಜ್ಯದಲ್ಲಿ ‘NHM ಯೋಜನೆ’ಯಡಿ ನೇಮಕಗೊಳ್ಳುವ ವೈದ್ಯರು, ಸ್ಟಾಫ್ ನರ್ಸ್ ಗಳಿಗೆ ಭರ್ಜರಿ ಸಿಹಿಸುದ್ದಿ