ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಗೊಂದಲ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಇದೀಗ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಡಿಕೆಶಿ ಅವರು ತೆರಳಬೇಕಿದ್ದ ಬೆಳಗಿನ ಎರಡು ವಿಮಾನಗಳ ಟಿಕೆಟ್ ಅನ್ನು ರದ್ದುಗೊಳಿಸಿದ್ದಾರಂತೆ. ಇದೀಗ 3ನೇ ಬಾರಿ ಟಿಕೆಟ್ ಬುಕ್ ಮಾಡಿ ದೆಹಲಿಗೆ ತೆರಳಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಳಗ್ಗೆಯಿಂದ ಎರಡು ವಿಮಾನಗಳ ಟಿಕೆಟ್ ಕ್ಯಾನ್ಸಲ್ ಮಾಡಲಾಗಿದ್ದು, ನಿಗದಿಯಂತೆ ಡಿಸಿಎಂ ಡಿಕೆಶಿ ಬೆಳಗ್ಗೆಯೇ ಪ್ರಯಾಣ ಬೆಳಸಬೇಕಿತ್ತು. ಆದರೆ ಈಗ ಮಧ್ಯಾಹ್ನ 12.30ರ ವಿಮಾನದಲ್ಲಿ ತೆರಳಲು ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ. ಎರಡು ಬಾರಿ ಟಿಕೆಟ್ ಯಾಕೆ ರದ್ದುಗೊಳಿಸಿದರು ಎಂಬ ಕಾರಣ ಇನ್ನೂ ನಿಗೂಢವಾಗಿದೆ. ಬಳಿಕ 12:30 ವಿಮಾನದಲ್ಲಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.
ರಾಜ್ಯದಲ್ಲಿ ಅಧಿಕಾರದ ಹಸ್ತಾಂತರದ ಗೊಂದಲಕ್ಕೂ ಮಾತನಾಡಿರುವ ಡಿಕೆಶಿ, ನಾಯಕತ್ವದ ಗೊಂದಲದ ಬಗ್ಗೆ ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗಲಿದೆ. ಎಲ್ಲರೂ ಮೌನ ವಹಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿದ್ದಾರೆ. ಆದ್ದರಿಂದ ಖರ್ಗೆ ಅವರ ಆದೇಶವನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯಗೆ ಪರೋಕ್ಷವಾಗಿ ಮಾತಿನಲ್ಲೇ ಡಿಕೆಶಿ ತಿವಿದರು.








