ಕೆಎನ್ಎನ್ ಡಿಜಿಟಲ್ ಡೆಸ್ಕ್ : Citizenship Amendment Act ( ಪೌರತ್ವ ತಿದ್ದುಪಡಿ ಕಾಯ್ದೆ ) ಭಾರತದ ನೆರೆಯ ದೇಶಗಳಾದ ಆಫ್ಘಾನಿಸ್ತಾನ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶಗಳಿಂದ 2014 ರ ಡಿಸೆಂಬರ್ 31ಕ್ಕೆ ಮುನ್ನ ಭಾರತಕ್ಕೆ ಆಗಮಿಸಿದ ಆರು ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವ ಹೊಂದುವ ಅವಕಾಶ ಕೊಡುತ್ತದೆ.
ಈ ಮೂರೂ ಮುಸಲ್ಮಾನ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನರಿಗೆ ಪೌರತ್ವ ದೊರಕಿಸಿ ಕೊಡುವ ಕಾಯ್ದೆ ಇದಾಗಿದೆ.ಸಾಮಾನ್ಯ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಭಾರತೀಯ ಪೌರತ್ವ ಹೊಂದಬೇಕಾದರೆ ಕನಿಷ್ಠ 11 ವರ್ಷಗಳು ಭಾರತದಲ್ಲಿ ವಾಸವಾಗಿರಬೇಕು.ಆದರೆ, ಈ ಕಾಯ್ದೆಯಲ್ಲಿ ನೆರೆ ದೇಶಗಳ ಈ ಅಲ್ಪಸಂಖ್ಯಾತ ಸಮುದಾಯಗಳಿಗೆ ಈ ವಿಚಾರದಲ್ಲಿ ವಿನಾಯಿತಿ ಕೊಡಲಾಗಿದೆ.
ಸಿಎಎಗೆ ಮುಸಲ್ಮಾನರ ವಿರೋಧ ಏಕೆ?
ಸಿಎಎ ಎಂಬ ಈ ಕಾಯ್ಧೆಯಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡಲಾಗಿದೆ. ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಮುಸಲ್ಮಾನರು ಇಲ್ಲ ಎಂಬುದು ಮುಸಲ್ಮಾನ ನಾಯಕರ ಅಭಿಪ್ರಾಯ.ಭಾರತದಲ್ಲಿ ಎರಡನೇ ಅತಿ ದೊಡ್ಡ ಸಂಖ್ಯೆಯಲ್ಲಿ ಇರುವ ಮುಸಲ್ಮಾನರು ಅಲ್ಪಸಂಖ್ಯಾತರು. ಆದರೆ, ಮುಸಲ್ಮಾನ ರಾಷ್ಟ್ರಗಳಲ್ಲಿ ಅತೀ ದೊಡ್ಡ ಹಾಗೂ ಮೊದಲ ಜನಸಂಖ್ಯೆ ಎನಿಸಿರುವ ಮುಸಲ್ಮಾನರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲು ಹೇಗೆ ಸಾಧ್ಯ ? ಎಂಬುದು ಸರ್ಕಾರದ ಸವಾಲು.
ಶ್ರೀಲಂಕಾ ಮೊದಲಾದ ನೆರೆಯ ದೇಶಗಳಲ್ಲಿಯೂ ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದಾರೆ. ಅವರಿಗೇಕೆ ಪೌರತ್ವ ಕೊಡುತ್ತಿಲ್ಲ? ಎಂಬುದು ಕೆಲವು ರಾಜಕೀಯ ಮುಖಂಡರ ಪ್ರಶ್ನೆ.ಈ ಕಾಯ್ದೆಯು ಆಫ್ಘಾನಿಸ್ತಾನ, ಬಾಂಗ್ಲಾ ದೇಶ ಹಾಗೂ ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ ಅನ್ವಯಿಸುತ್ತದೆ.
ಆದ್ದರಿಂದ, ಮತ ಬ್ಯಾಂಕ್ ರಾಜಕೀಯ ದೃಷ್ಟಿಯಿಂದ ಅಲ್ಪಸಂಖ್ಯಾತರನ್ನು ಓಲೈಸುವ ಮತ್ತು ಪ್ರಚೋದಿಸುವ ಪಟ್ಟಭದ್ರ ಹಿತಾಸಕ್ತಿಗಳ ಇಂತಹ ಪ್ರಶ್ನೆಗಳೇ ಅಪ್ರಸ್ತುತ*ಎಂಬುದು ಸರ್ಕಾರದ ತರ್ಕ.ಮುಸಲ್ಮಾನರನ್ನು ಉದ್ದೇಶಪೂರ್ವಕವಾಗಿಯೇ ಮೂಲೆ ಗುಂಪು ಮಾಡಲಾಗುತ್ತಿದೆ ಎಂಬ ಕೆಲವು ಧಾರ್ಮಿಕ ಮುಖಂಡರ ಆತಂಕದಲ್ಲಿ ಹುರುಳೂ ಇಲ್ಲ. ತಿರುಳೂ ಇಲ್ಲ ಎಂಬುದು ಸರ್ಕಾರದ ಸ್ಪಷ್ಟ ನಿಲುವು.
ಗಮನಿಸಬೇಕಾದ ಸಂಗತಿ !
1) ಪೌರತ್ವ ಅವಕಾಶ ಎಲ್ಲರಿಗೂ ಸಮಾನವಾಗಿರಬೇಕು.
2) ಕೆಲವು ನಿರ್ದಿಷ್ಟ ಸಮುದಾಯಗಳಿಗೆ ಮನ್ನಣೆ ಹಾಗೂ ಮಾನ್ಯತೆ ಕೊಡುವುದು ತಪ್ಪು ಎಂಬುದು ಪ್ರತಿ ಪಕ್ಷಗಳ ಕೆಲವು ಮುಖಂಡರ ಆಕ್ಷೇಪ.
3) ನೆರೆ ರಾಷ್ಟ್ರಗಳಲ್ಲಿನ ಭಾರತೀಯ ಸಂಸ್ಕೃತಿಯ ಅನುಯಾಯಿಗಳಿಗೆ ನೆರವು ನೀಡಿ ಆಶ್ರಯ ಕಲ್ಪಿಸುವ ತನ್ನ ಕ್ರಮ ಸರಿ ಎಂಬುದು ಸರ್ಕಾರದ ಸಮರ್ಥನೆ.
4) ಈ ಕಾಯ್ದೆಯಿಂದ ಭಾರತೀಯ ಮುಸಲ್ಮಾನರಿಗೇ ಯಾವುದೇ ಅಪಾಯವೂ ಇಲ್ಲ. ಅನಾನುಕೂಲವೂ ಆಗುವುದಿಲ್ಲ ಎಂಬುದು ಸರ್ಕಾರದ ಅಭಯ.
ಎನ್ಆರ್ ಸಿ ಎಂದರೇನು ?
National Register of Citizens ಎಂಬುದು ದೇಶದ ನಾಗರಿಕರ ನೊಂದಣಿ ಮಾಡಿಕೊಳ್ಳುವ ಯೋಜನೆಯಾಗಿದೆ. ದೇಶದ ಎಲ್ಲಾ ಪ್ರಜೆಗಳ ಅಧಿಕೃತ ಪಟ್ಟಿ ಎನಿಸುವ ಎನ್ ಆರ್ ಸಿ ಪಟ್ಟಿಯು ಅಕ್ರಮವಾಗಿ ವಲಸೆ ಬಂದವರನ್ನು ಗುರುತಿಸಲು ನೆರವಾಗುತ್ತದೆ. ಅಲ್ಲದೆ, ಅಂತಹ ನುಸುಳುಕೋರ ವಲಸಿಗರನ್ನು ಹೊರಹಾಕಲು ಅನುಕೂಲವಾಗುತ್ತದೆ. ಬಾಂಗ್ಲಾದೇಶ ಹಾಗೂ ಮಯನ್ಮಾರ್ ನಿಂದ ಅಕ್ರಮವಾಗಿ ವಲಸೆ ಬಂದ ಜನರನ್ನು ಗುರುತಿಸಿ, ಹೊರಹಾಕಲು ಹಾಗೂ ದೇಶಕ್ಕೆ ಪ್ರವೇಶಿಸುವ ನುಸುಳು ಕೋರರನ್ನು ತಡೆಗಟ್ಟಲು ಎನ್ ಆರ್ ಸಿ ಸಹಾಯವಾಗಲಿದೆ