ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ (ದಳಪತಿ ವಿಜಯ್) ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಅವರ ಸಂಪುಟದಲ್ಲಿ ಸ್ಥಾನ ಪಡೆದ 29 ವರ್ಷದ ಎಸ್. ಕೀರ್ತನಾ ಈಗ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮೊದಲ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಮಹಿಳಾ ಸಚಿವೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ವಿಜಯ್ ಅವರ ಪಕ್ಷದ ಟಿಕೆಟ್‌ನಿಂದ ಶಿವಕಾಶಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು, ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಜಿ. ಅಶೋಕನ್ ಅವರ ವಿರುದ್ಧ ಸುಮಾರು 11,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮೂಲತಃ ವಿಲ್ಲುಪುರಂ ಜಿಲ್ಲೆಯವರಾದ ಕೀರ್ತನಾ, ಸರ್ಕಾರಿ ಶಾಲೆಯಲ್ಲಿ ತಮಿಳು ಮಾಧ್ಯಮದಲ್ಲಿ ಶಿಕ್ಷಣ ಪಡೆದವರು. ನಂತರ ಗಣಿತದಲ್ಲಿ ಪದವಿ ಹಾಗೂ ಪುದುಚೇರಿ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಅಂಕಿಅಂಶದಲ್ಲಿ (Statistics) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಯಾವುದೇ ಬಲಿಷ್ಠ ರಾಜಕೀಯ ಹಿನ್ನೆಲೆಯಿಲ್ಲದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಇವರು, ರಾಜಕೀಯ ಸಲಹೆಗಾರರಾಗಿ (Political Consultant) ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಸಾಮಾನ್ಯವಾಗಿ ತಮಿಳುನಾಡು ರಾಜಕಾರಣದಲ್ಲಿ ಹಿಂದಿ ಹೇರಿಕೆಯ ವಿರುದ್ಧ ತೀವ್ರ ಪ್ರತಿರೋಧವಿರುತ್ತದೆ. ಆದರೆ, ಕೀರ್ತನಾ ಅವರು ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.








