ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಉತ್ತಮ ಆರೋಗ್ಯಕ್ಕಾಗಿ ಮೊಟ್ಟೆ ತಿನ್ನಿ ಎಂದು ವೈದ್ಯರ ಸಲಹೆ ನೀಡುತ್ತಾರೆ.
ಮೊಟ್ಟೆಗಳಲ್ಲಿ ಒಂದು ಬಿಳಿ ಬಣ್ಣದ ಮೊಟ್ಟೆ ಇನ್ನೊಂದು ಬ್ರೌನ್ ಬಣ್ಣದ ಮೊಟ್ಟೆ ನೋಡಿದ್ದೀರಿ. ಆದರೆ, ಈ ಎರಡೂ ಮೊಟ್ಟೆಗಳ ನಡುವಿನ ವ್ಯತ್ಯಾಸ ಏನು ಎಂಬುದು ನಿಮಗೆ ತಿಳಿದಿದೆಯೇ? ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ನೋಡಿ ಮಾಹಿತಿ.
ಸಾಮಾನ್ಯವಾಗಿ ಆಹಾರದ ವಿಷಯಕ್ಕೆ ಬಂದಾಗ, ಜನರು ಬ್ರೌನ್ ಪದಾರ್ಥಗಳನ್ನೇ ಆರೋಗ್ಯಕರವೆಂದು ಪರಿಗಣಿಸುತ್ತಾರೆ. ಉದಾಹರಣೆಗೆ ಬ್ರೌನ್ ಅಕ್ಕಿ, ಬ್ರೌನ್ ಸಕ್ಕರೆ, ಬ್ರೌನ್ ಬ್ರೆಡ್ ಮತ್ತು ಈಗ ಬ್ರೌನ್ ಮೊಟ್ಟೆಗಳು. ದೇಸಿ ಮೊಟ್ಟೆಗಳು ಅಂದರೆ ಬ್ರೌನ್ ಬಣ್ಣದ ಮೊಟ್ಟೆಗಳು ಬಿಳಿ ಮೊಟ್ಟೆಗಳಿಗಿಂತ ಹೆಚ್ಚು ಆರೋಗ್ಯಕರವೆಂದು ಹೇಳಲಾಗುತ್ತದೆ.
ಮೊಟ್ಟೆಯನ್ನು ಪ್ರೋಟೀನ್ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಪ್ರೋಟೀನ್ ಜೊತೆಗೆ ಕ್ಯಾಲ್ಸಿಯಂ ಸಹ ಮೊಟ್ಟೆಯಲ್ಲಿದೆ. ಇದು ಮೂಳೆಗಳನ್ನು ಗಟ್ಟಿಯಾಗಿಡಲು ಸಹಾಯ ಮಾಡುತ್ತದೆ. ನಿತ್ಯ ಮೊಟ್ಟೆಯನ್ನು ಸೇವಿಸುವ ಮೂಲಕ ತೂಕವನ್ನೂ ನಿಯಂತ್ರಣದಲ್ಲಿ ಇರಿಸಬಹುದು. ಅದರಲ್ಲೂ ಈ ಚಳಿಗಾಲದಲ್ಲಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಬಿಳಿ ಮತ್ತು ಕಂದು ಮೊಟ್ಟೆಗಳ ನಡುವಿನ ವ್ಯತ್ಯಾಸ
ದೇಸಿ ಮೊಟ್ಟೆಗಳು ಬ್ರೌನ್ ಬಣ್ಣದಲ್ಲಿರುತ್ತವೆ. ಫಾರ್ಮ್ ಮೊಟ್ಟೆಗಳು ಬಿಳಿ ಬಣ್ಣದಲ್ಲಿರುತ್ತವೆ. ಬಿಳಿ ಮೊಟ್ಟೆಗಳಿಗಿಂತ ಕಂದು ಬಣ್ಣದ ಮೊಟ್ಟೆಗಳು ಆರೋಗ್ಯಕರವೆಂದು ಹೇಳಲಾಗುತ್ತದೆ. ಆದರೆ ಮೊಟ್ಟೆಯ ಪೌಷ್ಟಿಕಾಂಶದ ಮೌಲ್ಯ ಅದರ ಬಣ್ಣದಿಂದ ಅಳೆಯಲಾಗುವುದಿಲ್ಲ. ಕೋಳಿಗಳ ಆಹಾರದಿಂದ ನಿರ್ಧರಿಸಲ್ಪಡುತ್ತದೆ. ಬಿಸಿಲಿಗೆ ತೆರೆದುಕೊಂಡು ಚೆನ್ನಾಗಿ ತಿನ್ನಿಸಿದ ಕೋಳಿಗಳ ಮೊಟ್ಟೆಗಳು ಎಲ್ಲ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಫಾರ್ಮ್ನಲ್ಲಿ ಬಿಸಿಲಿನ ಶಾಖ ಇಲ್ಲದೆ, ಸರಿಯಾದ ಆಹಾರ ಪಡೆಯದ ಕೋಳಿಗಳ ಮೊಟ್ಟೆಗಳು ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತವೆ.
ಎರಡರಲ್ಲಿ ಯಾವುದು ಉತ್ತಮ ಮೊಟ್ಟೆ?
ಫಾರ್ಮ್ನಲ್ಲಿನ ಕೋಳಿಗಳ ಮೊಟ್ಟೆಗಳಲ್ಲಿ ಪೋಷಕಾಂಶ ಕಡಿಮೆ. ಮನೆಯಂಗಳದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತ ಆಹಾರ ತಿನ್ನುವ ಜವಾರಿ (ನಾಟಿ) ಕೋಳಿಗಳ ಮೊಟ್ಟೆ ಹೆಚ್ಚು ಸತ್ವಯುಕ್ತವಾಗಿರುತ್ತವೆ. ಆ ಕೋಳಿಗಳ ಮೊಟ್ಟೆಗಳು ಕಂದು ಬಣ್ಣದ್ದಾಗಿರುತ್ತವೆ. ಆ ಕಾರಣಕ್ಕೆ ಅವುಗಳಲ್ಲಿ ಪ್ರೋಟೀನ್, ಕ್ಯಾಲೋರಿಗಳು ಅಧಿಕವಾಗಿರುವುದಕ್ಕೆ. ಕಂದು ಮೊಟ್ಟೆಗಳು ಹೆಚ್ಚು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ರುಚಿಯ ಬಗ್ಗೆ ಹೇಳುವುದಾದರೆ, ಕಂದು ಬಣ್ಣದ ಮೊಟ್ಟೆಯ ಹಳದಿ ಭಾಗವು ಬಿಳಿ ಮೊಟ್ಟೆಗಿಂತ ಸ್ವಲ್ಪ ಗಾಢ ಬಣ್ಣದ್ದಾಗಿರುತ್ತದೆ. ಕೋಳಿಗಳ ವಿಭಿನ್ನ ಆಹಾರ ಕ್ರಮದಿಂದಾಗಿ ಎರಡು ಮೊಟ್ಟೆಗಳ ರುಚಿಯಲ್ಲಿ ವ್ಯತ್ಯಾಸವಿದೆ.
ಚಳಿಗಾಲದಲ್ಲಿ ಎಷ್ಟು ಮೊಟ್ಟೆ ತಿನ್ನಬೇಕು?
ಪೌಷ್ಟಿಕತಜ್ಞ ವರುಣ್ ಕಟ್ಯಾಲ್ ಪ್ರಕಾರ, ಹಳದಿ ಲೋಳೆಯೊಂದಿಗೆ ದಿನಕ್ಕೆ ಒಂದು ಮೊಟ್ಟೆಯನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ನೀವು ಮೊಟ್ಟೆಯ ಬಿಳಿಭಾಗವನ್ನು ತಿನ್ನುವಾಗ, ನೀವು ಮೂರರಿಂದ ನಾಲ್ಕು ಮೊಟ್ಟೆಗಳನ್ನು ಸಹ ಸೇವಿಸಬಹುದು.