ಬೆಂಗಳೂರು: ಬೆಂಗಳೂರು -ಮೈಸೂರು ಮೂಲಸೌಕರ್ಯ ಕಾರಿಡಾರ್ (NICE) ಯೋಜನೆಗಾಗಿ ವಶಪಡಿಸಿಕೊಂಡ ಭೂಮಿಗೆ ವರ್ಷಗಳೇ ಕಳೆದಿದ್ದರೂ ಈವರೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದ ಬಗ್ಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಆ ಬಗ್ಗೆ ರಾಜ್ಯ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಪಕ್ಷದ ರಾಜ್ಯದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ನೈಸ್ ಯೋಜನೆ ಹೆಸರಿನಲ್ಲಿ ರೈತರ ಭೂಮಿಯನ್ನು ಲೂಟಿ ಹೊಡೆಯಲಾಗಿದೆ. ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು, ಕಾಂಗ್ರೆಸ್ ನಾಯಕರು ಎಲ್ಲಾ ಸೇರಿ ರೈತರ ಭೂಮಿಯನ್ನು ಕೊಳ್ಳೆ ಹೊಡೆದಿದ್ದಾರೆ.
22 ವರ್ಷಗಳೇ ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡದ ಅಧಿಕಾರಿಗಳ ಉದಾಸೀನತೆ, ಗಾಢನಿದ್ರೆಯ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಆದರೂ ಈ ರಾಜ್ಯ ಸರ್ಕಾರ ರೈತರ ಹಿತ ಮರೆತು ಗಾಢನಿದ್ರೆಯಲ್ಲಿದೆ. ರಸ್ತೆ ಮಾಡುತ್ತೇವೆ ಎಂದು ಹೇಳಿ ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ. ಟಿ.ಬಿ.ಜಯಚಂದ್ರ ಅವರ ನೇತೃತ್ವದ ಸದನ ಸಮಿತಿ ಇಡೀ ಯೋಜನೆಯನ್ನೇ ಸರ್ಕಾರ ವಶಕ್ಕೆ ಪಡೆದು ಉನ್ನತ ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿತ್ತು. ಹಾಗಿದ್ದರೂ ಈ ಸರ್ಕಾರ ಗಾಢನಿದ್ರೆಯಲ್ಲಿದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ತಿಂಗಳ ಒಳಗಾಗಿ ರೈತರಿಗೆ ಪರಿಹಾರ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 2019 ಏಪ್ರಿಲ್ 22ಕ್ಕೆ ಅನ್ವಯ ಆಗುವಂತೆ ರೈತರು ಕಳೆದುಕೊಂಡಿರುವ ಭೂಮಿಗೆ ಮಾರುಕಟ್ಟೆ ಮೌಲ್ಯ ನಿರ್ಧರಿಸಬೇಕು ಎಂದು ಕೋರ್ಟ್ ಆದೇಶ ಕೊಟ್ಟಿದೆ. ಸುಪ್ರೀಂ ಕೋರ್ಟ್ ಆದೇಶ ಬಂದು ಎಷ್ಟು ದಿನವಾಯಿತು. ಸದಾ ಎಂ.ಬಿ.ಪಾಟೀಲ್ ಅವರೇ ಏನು ಮಾಡುತ್ತಿದ್ದೀರಿ? ಪರಿಹಾರ ಕೊಡಿಸದೆ ಏನು ಮಾಡುತ್ತೀರಿ? ಎಂದು ಖಾರವಾಗಿ ಪ್ರಶ್ನೆ ಮಾಡಿದರು ಕುಮಾರಸ್ವಾಮಿ ಅವರು.
ತೆರಿಗೆ ಪಾಲು; ಕಾಂಗ್ರೆಸ್ ಪಕ್ಷದ್ದೇ ತಪ್ಪು:
ಕೇಂದ್ರ ಸರಕಾರದ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಐವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಮಾಡಿರುವ ತಪ್ಪುಗಳೇ ಇದಕ್ಕೆಲ್ಲ ಕಾರಣ. ನೆಹರು ಅವರ ಕಾಲದಲ್ಲಿ ಹಣಕಾಸು ಆಯೋಗದ ಪರಿಕಲ್ಪನೆಯನ್ನು ಜಾರಿಗೆ ತಂದು ಅಲ್ಲಿಂದ ಆ ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ತೆರಿಗೆ ಪಾಲು ಕೊಡುವ ಪದ್ಧತಿ ಜಾರಿಗೆ ತರಲಾಯಿತು. ಈಗಲೂ ಅದೇ ಪದ್ಧತಿ ಆಧಾರದ ಮೇಲೆ ರಾಜ್ಯಕ್ಕೆ ತೆರಿಗೆ ಹಣವನ್ನು ಹಂಚಲಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ತೆರಿಗೆ ಅನ್ಯಾಯ ಎಂದು ಕೂಗಾಡುತ್ತಿರುವ ಕಾಂಗ್ರೆಸ್ಸಿಗರು, ಹಣಕಾಸು ಆಯೋಗದ ನಿಯಮಗಳಿಗೆ ತಿದ್ದುಪಡಿ ತಂದು ತೆರಿಗೆ ಹಂಚಿಕೆ ಪಾಲನ್ನು ಹೆಚ್ಚಿಸಿಕೊಳ್ಳಲು ಕ್ರಮ ವಹಿಸಬೇಕಿತ್ತು. ಮನಮೋಹನ್ ಸರಕಾರ ಹತ್ತು ವರ್ಷ ಇತ್ತು. ಆಗ ರಾಜ್ಯ ಕಾಂಗ್ರೆಸ್ ನಾಯಕರು ಏನು ಮಾಡುತ್ತಿದ್ದರು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!
ಕಪಿಲ್ ದೇವ್ ತಲೆಗೆ ಗುಂಡು ಹಾರಿಸಲು ಬಯಸಿದ್ದೆ: ಯುವರಾಜ್ ಸಿಂಗ್ ತಂದೆ | Kapil Dev