ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಹವಾ ಹೊರಟುಹೋಗಿದೆ. ಇನ್ನು ಮುಂದೆ ಕಾಂಗ್ರೆಸ್ ರಾಜ್ಯದಲ್ಲಿ ತಲೆ ಎತ್ತುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್ ಹವಾ ಹೊರಟುಹೋಗಿರುವುದು ಸ್ಪಷ್ಟವಾಗಿದೆ ಎಂದರು. ದಕ್ಷಿಣ ಕನ್ನಡದ ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ, ಉತ್ತರ ಕನ್ನಡದ ಮಂಕಿ ಪಟ್ಟಣ ಪಂಚಾಯಿತಿ, ಬೆಂಗಳೂರು ಗ್ರಾಮಾಂತರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದೆ. ಈ ನಾಲ್ಕರಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ ಹಾಗೂ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿದೆ ಎಂದು ಸಂತಸ ಸೂಚಿಸಿದರು.
ದೊಡ್ಡಬಳ್ಳಾಪುರ ನಗರಸಭೆಯ ಒಂದು ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ. ರಾಯಚೂರಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯ ಒಂದು ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ. ಎರಡೂ ಕಡೆ ಬಿಜೆಪಿ ಗೆಲುವು ಸಾಧಿಸಿದೆ ಎಂದು ತಿಳಿಸಿದರು.
ಶಿಥಿಲಾವಸ್ಥೆಯಲ್ಲಿದೆ ಕಾಂಗ್ರೆಸ್ ಪಕ್ಷ
ಕಾಂಗ್ರೆಸ್ ಪಕ್ಷ ಅವಸಾನದ ಅಂಚಿಗೆ ತಲುಪಿದೆ. ಇದೊಂದು ಹಳೆಯ ಪಾರ್ಟಿ ಎಂದು ಅವರೇ ಹೇಳಿಕೊಳ್ಳುತ್ತಾರೆ. ಆ ಕಾರಣದಿಂದ ಕಾಂಗ್ರೆಸ್ ಈಗ ಶಿಥಿಲಾವಸ್ಥೆಯಲ್ಲಿದೆ ಎಂದು ಟೀಕಿಸಿದರು. ಈಗಾಗಲೇ ರಾಹುಲ್ ಗಾಂಧಿ ಮೂಲಕ ಪಕ್ಷ ಕಟ್ಟುವುದಾಗಿ ಹೇಳಿಕೊಳ್ಳುತ್ತಿದ್ದವರು ಈಗ ಅವರು ನಿಷ್ಪ್ರಯೋಜಕ, ಅವರು ನಮಗೆ ಬೇಕಾಗಿಲ್ಲ; ನಮಗೆ ಮಲ್ಲಿಕಾರ್ಜುನ ಖರ್ಗೆಯವರೂ ಬೇಕಾಗಿಲ್ಲ ಎನ್ನುತ್ತಿದ್ದಾರೆ. ಈಗ ನಿನ್ನೆಯಿಂದ ರಾಹುಲ್ ಗಾಂಧಿ ಹಠಾವೋ ಆರಂಭವಾಗಿದೆ. ಪ್ರಿಯಾಂಕ ಗಾಂಧಿ ಲಾವೋ ಎನ್ನಲಾರಂಭಿಸಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ಸಿನವರು ಇನ್ಯಾವ ಜನ್ಮದಲ್ಲೂ ಪ್ರಧಾನಿಯಾಗುವುದಿಲ್ಲ. ರಾಹುಲ್ ಹೆಸರು ಹೇಳಿದರೆ ಇನ್ನು ಮುಂದೆ 50 ಬಿಡಿ; 20 ಸೀಟು ಗೆಲ್ಲಲೂ ಕಷ್ಟ ಎಂಬ ಕಾರಣಕ್ಕಾಗಿ ಪ್ರಿಯಾಂಕ ಗಾಂಧಿ ಹೆಸರನ್ನು ಹೇಳಲು ಆರಂಭಿಸಿದ್ದಾರೆ. ಖುದ್ದು ಅವರ ಮನೆ ಅಳಿಯ ವಾಧ್ರಾ ಕೂಡ ಇದನ್ನೇ ಹೇಳುತ್ತಿದ್ದಾರೆ ಎಂದರು.
ದೇಶದ್ರೋಹದ ಕಾನೂನಿನ ಅಡಿಯಲ್ಲಿ ಬಂಧಿಸಿ..
ರಾಹುಲ್ ಗಾಂಧಿಯವರ ಮಾನಸಿಕ ಸ್ಥಿತಿ ಕುರಿತು ಪರೀಕ್ಷೆ ಮಾಡುವ ಅಗತ್ಯವಿದೆ. ಹೊರದೇಶದಲ್ಲೂ ದೇಶವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಈ ಮೂಲಕ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಮಾನ್ಯ ಪ್ರಧಾನಿಯವರು ರಾಹುಲ್ ಅವರನ್ನು ದೇಶದ್ರೋಹದ ಕಾನೂನಿನ ಅಡಿಯಲ್ಲಿ ಬಂಧಿಸಬೇಕು. ಇಲ್ಲವೇ ಅವರನ್ನು ದೇಶದಿಂದ ಗಡೀಪಾರು ಮಾಡಬೇಕೆಂದು ಮನವಿ ಮಾಡುವುದಾಗಿ ಹೇಳಿದರು.
ಲೂಟಿ ಮಾಡಿದ ಹಣದಿಂದ ಕಾಂಗ್ರೆಸ್ ಪಕ್ಷವನ್ನು ನಡೆಸಲಾಗುತ್ತಿದೆ
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕಾಗಿ ದೊಡ್ಡ ಹೋರಾಟ ನಡೆಯುತ್ತಿದೆ. ಏನೂ ಇಲ್ಲ ಅಂದುಕೊಂಡೇ ಬ್ರೇಕ್‍ಫಾಸ್ಟ್, ಡಿನ್ನರ್ ಪಾರ್ಟಿ ನಡೆದಿದೆ. ಮುಖ್ಯಮಂತ್ರಿ 5 ವರ್ಷ ನಾನೇ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಇವರೇ 2028ರವರೆಗೆ ಮುಖ್ಯಮಂತ್ರಿ ಎಂದು ಜಮೀರ್ ಸೇರಿ ಹಲವರು ಹೇಳುತ್ತಿದ್ದಾರೆ. 2028ಕ್ಕೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಎನ್ನುತ್ತಾರೆ. 2028ರಲ್ಲಿ ಅವರು ಸಿಎಂ ಆಗಲು ಹೇಗೆ ಸಾಧ್ಯ? ಇವತ್ತೇ ಚುನಾವಣೆಗೆ ಹೋದರೂ ಕಾಂಗ್ರೆಸ್ ಪಕ್ಷ ಗೆಲ್ಲುವುದಿಲ್ಲ ಎಂದು ತಿಳಿಸಿದರು.
ನರಿ, ಕರಡಿ ವ್ಯವಸಾಯದ ಕಥೆಯನ್ನು ಉದಾಹರಣೆಯಾಗಿ ತಿಳಿಸಿದರು. ಕರಡಿ- ನರಿಯ ವ್ಯವಸಾಯದ ಆಟವನ್ನು ಕಾಂಗ್ರೆಸ್ಸಿನವರು ಚೆನ್ನಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಆಡಳಿತ ಮಾಡುವ ರಾಜ್ಯದಲ್ಲಿ ಲೂಟಿ ಮಾಡಿದ ಹಣದಿಂದ ಕಾಂಗ್ರೆಸ್ ಪಕ್ಷವನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.








