ಬೆಂಗಳೂರು : ನಾನು ಶಾಸಕನಾಗಿ ಮೊದಲು ಹೋದಾಗ ಒಂದು ವಿಷಯ ಗೊತ್ತಾಯ್ತು. ಶಿಕ್ಷಣ ಇಲ್ಲದೆ ರಾಜಕಾರಣಿ ಆಗಬಾರದು ಎಂಬುದು. ಆಗ ದೊಡ್ಡ ರಾಜಕಾರಣಿಗಳು ಇದ್ರು. ರಾಮಕೃಷ್ಣ ಹೆಗಡೆಯಂತಹ ರಾಜಕಾರಣಿ ಇದ್ರು. ಆಗಲೇ ಶಿಕ್ಷಣದ ಮಹತ್ವ ಅರಿವಿಗೆ ಬಂತು. ನಾನು ತಡವಾಗಿಯಾದ್ರೂ ಗ್ರಾಜ್ಯುಯೆಟ್ ಮಾಡಿಕೊಂಡೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ನಡೆಯುತ್ತಿರುವ ಶಿಕ್ಷಕರ ದಿನಾಚರಣೆ ಹಾಗೂ ದಿ.ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂದೆ, ತಾಯಿ ಮಾತನ್ನೂ ಕೇಳದ ಮಕ್ಕಳು ಶಿಕ್ಷಕರು ಹೇಳಿಕೊಟ್ಟಿದನ್ನ ಕಲಿಯುತ್ತಾರೆ. ನಾನು ಸರಿಯಾದ ಶಿಕ್ಷಣ ಇಲ್ಲದ ವಿದ್ಯಾರ್ಥಿ. ಶಿಕ್ಷಣದ ಬೆಲೆ ಏನು ಅಂತಾ ನನಗೆ ಅರಿವಿದೆ. ತುಂಬಾ ತಡವಾಗಿ ಗ್ಯಾಜ್ಯುಯೇಟ್ ಪಡೆದಿದ್ದೇನೆ ಎಂದರು.
ಅಕ್ಷರ ಕಲಿಸುವ ಶಿಕ್ಷಕರು ಸೈನಿಕರು. ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಕಳುಹಿಸುತ್ತಾರೆ. ನಾವ್ಯಾರೂ ವಿದ್ಯೆ ಕಲಿಸಿದ ಗುರುಗಳನ್ನು ಮರೆಯಲು ಸಾಧ್ಯವಿಲ್ಲ. ರಾಜಕಾರಣಿಗಳನ್ನು ಜನರು ಬೇಗ ಮರೆತು ಹೋಗುತ್ತಾರೆ. ಆದರೆ ಶಿಕ್ಷಕರನ್ನು ಮರೆಯಲು ಆಗೊಲ್ಲ ಎಂದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರಾಜೀವ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.