ದಾವಣಗೆರೆ : ನನ್ನ ಪುತ್ರ ಸಂಸದ ಸುನೀಲ್ ಭೋಸ್ ಮಹಿಳಾ ಕೆಎಎಸ್ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟಿದ್ದಾರೆ. ಇದರಲ್ಲಿ ಏನು ಸಮಸ್ಯೆ? ತಪ್ಪು ಏನಿದೆ? ಎಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌ಸಿ ಮಹದೇವಪ್ಪ ಕೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಹಾಗೂ ಹಿಂದೂ ಸಂಪ್ರದಾಯದಲ್ಲಿ ಎಲ್ಲರೂ ಸಮಾನರಾಗಿದ್ದಾರೆ. ಯಾವುದೇ ಲಿಂಗಭೇದ ಅಥವಾ ತಾರತಮ್ಯಕ್ಕೆ ಅವಕಾಶವಿಲ್ಲ. ಯಾರು ಯಾರಿಗೆ ಬೇಕಾದ್ರು ಕುಂಕುಮ ಇಡಬಹುದು. ಹೀಗಿರುವಾಗ ನನ್ನ ಪುತ್ರ ಸಂಸದ ಸುನೀಲ್ ಭೋಸ್ ಮಹಿಳಾ ಕೆಎಎಸ್ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟಿದ್ದರಲ್ಲಿ ತಪ್ಪೇನಿಲ್ಲ ಎಂದರು.
ಘಟನೆ ಹಿನ್ನೆಲೆ?
ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಇಂದು ಸಂಸದ ಸುನೀಲ್ ಭೋಸ್ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಕೂಡ ಹೋಗಿದ್ದರು. ಸಂಸದರಾಗಿದ್ದರಿಂದ ಹೆಚ್ಚಿನ ಆದ್ಯತೆ ನೀಡಿ ಗರ್ಭಗುಡಿಯೊಳಗೆ ಕರೆದುಕೊಂಡು ವಿಶೇಷ ಪೂಜೆ ಮಾಡಲು ಅವಕಾಶ ನೀಡಿದ್ದರು.
ಈ ವೇಳೆ ಇಬ್ಬರೂ ವಿಶೃಷವಾಗಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಈ ವೇಳೆ ಅರ್ಚಕರು ಕೊಟ್ಟ ಕುಂಕುಮವನ್ನು ಸುನೀಲ್ ಭೋಸ್ ತಾವು ಹಚ್ಚಿಕೊಂಡಿದ್ದಲ್ಲದೇ ತಮ್ಮ ಪಕ್ಕದಲ್ಲಿಯೇ ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ನಿಂತಿದ್ದ ಅಧಿಕಾರಿ ಸವಿತಾ ಅವರ ಹೆಗಲ ಮೇಲಿಂದ ಕೈ ಹಾಕಿ ಹಣೆಗೆ ಕುಂಕುಮ ಇಟ್ಟಿದ್ದಾರೆ. ಆದರೆ, ಈ ಬಗ್ಗೆ ರಾಜ್ಯದಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ.