ಗರ್ಭಾವಸ್ಥೆಯಲ್ಲಿ ಕಾಲು ಊದಿಕೊಳ್ಳುವುದು ಸಾಮಾನ್ಯ. ಪ್ರತಿಯೊಬ್ಬ ಗರ್ಭಿಣಿ ಇದನ್ನು ಅನುಭವಿಸುತ್ತಾರೆ. ಆದರೆ ಇದು ಅಷ್ಟು ಹೆದರುವಂತಹ ಸಮಸ್ಯೆ ಏನಲ್ಲ. ಮನೆಯಲ್ಲಿಯೇ ಕಾಲು ಊದಿಕೊಳ್ಳುವುದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ದೇಹದಲ್ಲಿ ಪೊಟ್ಯಾಶಿಯಮ್ ಅಂಶ ಕಡಿಮೆಯಾದರೆ ಕಾಲುಗಳು ಊದಿಕೊಳ್ಳುತ್ತವೆ. ಹಾಗಾಗಿ ಪೊಟ್ಯಾಶಿಯಮ್ ಹೆಚ್ಚಿರುವ ಬೀನ್ಸ್, ಬಾಳೆಹಣ್ಣು ನಂತಹ ಆಹಾರ ಪದಾರ್ಥಗಳನ್ನು ಸೇವಿಸಿ. ಆರೋಗ್ಯವನ್ನು ಸರಿದೂಗಿಸಿಕೊಳ್ಳಿ.
ಕಾಫಿ ಸೇವನೆ ಗರ್ಭಿಣಿಯರಿಗೆ ಹೆಚ್ಚು ಸೂಕ್ತವಲ್ಲ. ಕೆಫೇನ್ ಅಂಶ ಕಾಲುಗಳು ಊದಿಕೊಳ್ಳುವಂತೆ ಮಾಡಿಬಿಡುತ್ತವೆ. ಆದಷ್ಟು ಕಾಫಿ ಸೇವನೆ ಕಡಿಮೆ ಮಾಡಿಕೊಂಡರೆ ಒಳ್ಳೆಯದು.
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಅತೀ ಹೆಚ್ಚು ಉಪ್ಪು, ಉಪ್ಪಿನಕಾಯಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಸಂದರ್ಭದಲ್ಲಿ ಕಾಲು ಊದಿಕೊಂಡರೆ ಉಪ್ಪಿನ ಸೇವನೆ ಸಧ್ಯದ ಮಟ್ಟಿಗೆ ನಿಲ್ಲಿಸಿಬಿಡಿ. ಕಾರಣ ಉಪ್ಪು ಹೆಚ್ಚು ತಿಂದರೆ ಅದು ದೇಹದಲ್ಲಿ ಹೆಚ್ಚುವರಿ ನೀರನ್ನು ತನ್ನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಇದರಿಂದ ಕಾಲು ಊದಿಕೊಳ್ಳುತ್ತವೆ.
ಗರ್ಭಾವಸ್ಥೆಯಲ್ಲಿ ಕಾಲುಗಳು ಊದಿಕೊಂಡರೆ ಹೆಚ್ಚು ನೀರು ಕುಡಿಯಿರಿ. ದೇಹ ನಿರ್ಜಲೀಕರಣಗೊಂಡಾಗ ಕಾಲುಗಳು ಹೀಗೆ ಊದಿಕೊಳ್ಳುತ್ತವೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅತೀ ಹೆಚ್ಚಿನ ನೀರು ಸೇವನೆ ಬೇಡ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ನೀರು ಕುಡಿಯಿರಿ.
ಗರ್ಭಿಣಿಯರಿದ್ದಾಗ ಕಾಲುಗಳು ಊದಿಕೊಂಡರೆ ಯಾವುದಾದರೂ ಎಣ್ಣೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ನಿಮಗೆ ಬಗ್ಗಿ ಪಾದಗಳನ್ನು ಮಸಾಜ್ ಮಾಡಿಕೊಳ್ಳಲು ಆಗದಿದ್ದಾಗ ಮನೆಯ ಸದಸ್ಯರ ಬಳಿ ಮಸಾಜ್ ಮಾಡಿಸಿಕೊಳ್ಳಿ.
ಮತ್ತೊಂದು ಪರಿಹಾರವೇನೆಂದರೆ, ಒಂದು ಬಕೆಟ್‌ನಲ್ಲಿ ಅರ್ಧ ಬಕೆಟ್ ಉಗುರುಬೆಚ್ಚಗಿನ ನೀರು ಹಾಕಿ, ಅದಕ್ಕೆ ಎರಡು ಸ್ಪೂನ್ ಉಪ್ಪು ಹಾಕಿ ಇಪ್ಪತ್ತು ನಿಮಿಷ ಪಾದಗಳನ್ನು ಅದರಲ್ಲಿ ಇಡಿ. ಕಾಲು ಬಾವು ಕಡಿಮೆ ಆಗುತ್ತದೆ. ಗರ್ಭಿಣಿಯರಿದ್ದಾಗ ಎಡಕ್ಕೆ ತಿರುಗಿ ಮಲಗಿದ್ರೆ ಆರೋಗ್ಯಕ್ಕೆ ಉತ್ತಮ ಹಾಗು ಪಾದಗಳ ಊತವನ್ನು ಕಡಿಮೆ ಮಾಡುತ್ತದೆ.