ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಹೃದಯಾಘಾತ ಒಂದೆಲ್ಲ ಪಾರ್ಶ್ವವಾಯು ಕೂಡ ಸಂಭವಿಸುತ್ತಿದೆ. ಇದು ಬಹಳ ಗಂಭೀರವಾಗಿರುವಂತಹ ವಿಷಯ.
ಇದೇ ತಿಂಗಳು 29ಕ್ಕೆ ವಿಶ್ವ ಪಾರ್ಶ್ವವಾಯು ದಿನ. ಈ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶವೇ ವಿಶ್ವ ಪಾರ್ಶ್ವವಾಯು. ಈ ಸಂದರ್ಭದಲ್ಲಿ ಪಾರ್ಶ್ವವಾಯು ಸಂಭವಿಸುವ ಮುನ್ನ ಏನೆಲ್ಲಾ ಲಕ್ಷಣಗಳು ಕಂಡು ಬರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಉಪಯುಕ್ತವಾಗಿದೆ.
ಸ್ಟ್ರೋಕ್ನ ರೋಗ ಲಕ್ಷಣಗಳು ಗೊತ್ತಾಗುವುದಿಲ್ಲ. ಇದು ನಿರ್ದಿಷ್ಟವಾಗಿರುವುದಿಲ್ಲ. ಮೊದಲು ತಲೆ ತಿರುಗುವಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ವಾರಗಟ್ಟಲೆ ಮುಂದುವರೆಯಬಹುದು. ಆದ್ದರಿಂದ ಸಣ್ಣ ಪುಟ್ಟ ಸಮಸ್ಯೆಯನ್ನು ಕೂಡಾ ನಿರ್ಲಕ್ಷ್ಯ ವಹಿಸದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ.
ಸ್ಟ್ರೋಕ್ ಯಾಕೆ ಸಂಭವಿಸುತ್ತದೆ
ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಹೆಚ್ಚು. ರಕ್ತದ ಕೊರತೆಯಿಂದ ಮಿದುಳಿನ ಅಂಗಾಶದ ಜೀವಕೋಶಗಳು ಸಾಯುತ್ತವೆ. ಇದು ಮೆದುಳಿಗೆ ಹಾನಿ ಆಗಿ ಕೊನೆಗೆ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಹಾಗೇ ಪಾರ್ಶ್ವವಾಯು ಇಷೆಮಿಕ್ ಸ್ಟ್ರೋಕ್ ಹಾಗೂ ಹೆಮರೇಜ್ ಸ್ಟ್ರೋಕ್ ಎಂದು ಎರಡು ವಿಧಗಳಲ್ಲಿ ಸಂಭವಿಸುತ್ತದೆ. ಮೊದಲೆಲ್ಲಾ ವೃದ್ಧಾಪ್ಯದಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚಾಗಿತ್ತು. ಆದರೆ ಈಗ ಬದಲಾದ ಜೀವನಶೈಲಿಯಿಂದ ಯುವಜನತೆಯಲ್ಲೇ ಹೆಚ್ಚಾಗಿ ಈ ಸಮಸ್ಯೆ ಸಂಭವಿಸುತ್ತಿದೆ.
ಪಾರ್ಶ್ವವಾಯು ಲಕ್ಷಣಗಳು ಏನು..?
ತಲೆ ತಿರುಗುವಿಕೆ, ಕೈ ಹಾಗೂ ತೋಳುಗಳಲ್ಲಿ ದೌರ್ಬಲ್ಯ, ಕಾಲುಗಳಲ್ಲಿ ದೌರ್ಬಲ್ಯ, ಜ್ಞಾಪಕ ಶಕ್ತಿ ಕುಂದುವುದು, ಮಾತನಾಡಲು ತೊದಲುವುದು, ತಲೆನೋವು, ದೃಷ್ಟಿ ಮಂಜಾಗುವುದು ಇವೆಲ್ಲಾ ಸಮಸ್ಯೆಗಳು ದೀರ್ಘಕಾಲ ಇದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ
ಸ್ಟ್ರೋಕ್ ತಡೆಯುವುದು ಹೇಗೆ..?
ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಪರಿಹಾರ ಇದೆ. ಆದರೆ ಸಮಸ್ಯೆ ಬಂದಾಗ ಪರಿತಪಿಸುವ ಬದಲು ಮುನ್ನೆಚರಿಕೆ ವಹಿಸಿದರೆ ಪಾರ್ಶ್ವವಾಯುವಂತ ತೊಂದರೆ ನಮ್ಮನ್ನು ಕಾಡದಂತೆ ಮಾಡಬಹುದು. ಅದರಲ್ಲಿ ಉತ್ತಮವಾದ ಆಹಾರ ಪದ್ಧತಿ ಅನುಸರಿಸುವುದು ಬಹಳ ಮುಖ್ಯವಾಗಿದೆ. ನಿಮ್ಮ ಆಹಾರದಲ್ಲಿ ಉಪ್ಪು, ಸಕ್ಕರೆ ಕಡಿಮೆ ಮಾಡಿ. ಹಣ್ಣು, ಹಸಿರು ಸೊಪ್ಪುಗಳು, ತರಕಾರಿಗಳನ್ನು ಹೆಚ್ಚು ಸೇವಿಸಿ. ನೀವು ಅತಿಯಾದ ತೂಕ ಇದ್ದರೆ ಮೊದಲು ತೂಕ ಇಳಿಸುವತ್ತ ಗಮನ ಹರಿಸಿ.