ಮುಂಬೈ: ಹದಿನೆಂಟನೇ ಆವೃತ್ತಿಯ ಐಪಿಎಲ್ (IPL 2026) ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎಲ್ಲಾ ಹತ್ತು ತಂಡಗಳಿಗೆ ಕಟ್ಟುನಿಟ್ಟಿನ ಹೊಸ ತರಬೇತಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮುಖ್ಯವಾಗಿ ಗಮನ ಸೆಳೆದಿರುವುದು ‘ಮೂರೂವರೆ ಗಂಟೆಗಳ ನಿಯಮ’.
ಬಿಸಿಸಿಐ ಹೊರಡಿಸಿರುವ 5 ಪುಟಗಳ ಈ ಮಾರ್ಗಸೂಚಿಯ ಪ್ರಕಾರ, ಯಾವುದೇ ಐಪಿಎಲ್ ತಂಡವು ಪಂದ್ಯಾವಳಿ ಆರಂಭಕ್ಕೂ ಮುನ್ನ ನಡೆಸುವ ಅಭ್ಯಾಸ ಪಂದ್ಯಗಳು (Practice Matches) ನಿಗದಿತ ಸಮಯದೊಳಗೆ ಮುಗಿಯಬೇಕು.
ಫ್ಲಡ್‌ಲೈಟ್ (Floodlights) ಅಡಿಯಲ್ಲಿ ನಡೆಯುವ ಅಭ್ಯಾಸ ಪಂದ್ಯಗಳ ಅವಧಿಯು 3.5 ಗಂಟೆಗಳನ್ನು ಮೀರುವಂತಿಲ್ಲ.
ತಂಡಗಳು ರಾತ್ರಿಯಿಡೀ ಸುದೀರ್ಘವಾಗಿ ಅಭ್ಯಾಸ ಪಂದ್ಯಗಳನ್ನು ಆಡಿ ಮೈದಾನದ ಪಿಚ್ ಹಾಳು ಮಾಡಬಾರದು ಎಂಬ ಉದ್ದೇಶದಿಂದ ಈ ಸಮಯದ ಮಿತಿ ಹೇರಲಾಗಿದೆ.
ಟೂರ್ನಿಯ ಮೊದಲ ಪಂದ್ಯಕ್ಕೆ 4 ದಿನಗಳು ಬಾಕಿ ಇರುವಾಗ ಮುಖ್ಯ ಮೈದಾನದಲ್ಲಿ (Main Square) ಯಾವುದೇ ಅಭ್ಯಾಸ ಪಂದ್ಯ ಅಥವಾ ನೆಟ್ ಪ್ರಾಕ್ಟೀಸ್ ನಡೆಸುವಂತಿಲ್ಲ.ಒಂದು ತಂಡ ಅಭ್ಯಾಸ ನಡೆಸಿ ಹೋದ ನಂತರ, ಮತ್ತೊಂದು ತಂಡ ಅದೇ ಪಿಚ್ ಅಥವಾ ನೆಟ್ಸ್ ಬಳಸುವಂತಿಲ್ಲ. ಪ್ರತಿಯೊಂದು ತಂಡಕ್ಕೂ ಪ್ರತ್ಯೇಕ ಮತ್ತು ಹೊಸ ಪಿಚ್‌ಗಳನ್ನು ಒದಗಿಸುವುದು ಕಡ್ಡಾಯ.ಎದುರಾಳಿ ತಂಡದ ಆಟಗಾರರು ಹೇಗೆ ಅಭ್ಯಾಸ ಮಾಡುತ್ತಿದ್ದಾರೆ ಎಂದು ಗಮನಿಸುವುದನ್ನು ತಡೆಯಲು ‘ಶೇರ್ಡ್ ನೆಟ್ಸ್’ (Shared Nets) ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರತಿ ತಂಡಕ್ಕೆ ಕೇವಲ ಎರಡು ಅಧಿಕೃತ ಅಭ್ಯಾಸ ಪಂದ್ಯಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಅದಕ್ಕೂ ಮುನ್ನ ಬಿಸಿಸಿಐನಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಯಾಕಾಗಿ ಈ ನಿಯಮ?
ಮೈದಾನದ ಪಿಚ್‌ಗಳು ದೀರ್ಘಕಾಲದವರೆಗೆ ಉತ್ತಮ ಸ್ಥಿತಿಯಲ್ಲಿರಲಿ ಮತ್ತು ಆತಿಥೇಯ ತಂಡಕ್ಕೆ (Home Team) ಪಿಚ್ ವಿಷಯದಲ್ಲಿ ಯಾವುದೇ ಹೆಚ್ಚಿನ ಲಾಭ ಸಿಗದಂತೆ ನೋಡಿ ಕೊಳ್ಳುವುದು ಬಿಸಿಸಿಐನ ಮುಖ್ಯ ಉದ್ದೇಶವಾಗಿದೆ. ಎಲ್ಲ ತಂಡಗಳಿಗೂ ಸಮಾನವಾದ ಮತ್ತು ಉತ್ತಮ ಗುಣಮಟ್ಟದ ಅಭ್ಯಾಸದ ಸೌಲಭ್ಯ ಸಿಗಬೇಕು ಎಂದು ಈ ನಿಯಮಗಳನ್ನು ಜಾರಿಗೆ ತರಲಾಗಿದೆ.








