ವಾಷಿಂಗ್ಟನ್: ಜಾಗತಿಕ ವ್ಯಾಪಾರ ವಲಯದಲ್ಲಿ ಅಮೆರಿಕದ ಟ್ರಂಪ್ ಆಡಳಿತ ಮತ್ತೊಂದು ಕಠಿಣ ನಿರ್ಧಾರಕ್ಕೆ ಮುಂದಾಗಿದೆ. ‘ಬಲವಂತದ ಕಾರ್ಮಿಕ ಪದ್ಧತಿಯಿಂದ ತಯಾರಾದ ಸರಕುಗಳನ್ನು’ ತಡೆಯುವಲ್ಲಿ ವಿಫಲವಾಗಿವೆ ಎಂಬ ಆರೋಪದ ಮೇಲೆ ಭಾರತ ಸೇರಿದಂತೆ ಸುಮಾರು 60 ದೇಶಗಳ ಆಮದುಗಳ ಮೇಲೆ 12.5% ಹೆಚ್ಚುವರಿ ಸುಂಕ ವಿಧಿಸುವ ಪ್ರಸ್ತಾವನೆಯನ್ನು ಅಮೆರಿಕದ ವಾಣಿಜ್ಯ ಪ್ರತಿನಿಧಿ ಕಚೇರಿ (USTR) ಮುಂದಿಟ್ಟಿದೆ.
’ಬಲವಂತದ ಕಾರ್ಮಿಕ’ (Forced Labour) ಎಂದರೇನು?
ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ಪ್ರಕಾರ, ಯಾವುದೇ ವ್ಯಕ್ತಿಯನ್ನು ಅವರ ಒಪ್ಪಿಗೆಯಿಲ್ಲದೆ, ಶಿಕ್ಷೆ ಅಥವಾ ದಂಡದ ಭಯ ತೋರಿಸಿ ಕೆಲಸಕ್ಕೆ ಹಚ್ಚುವುದೇ ‘ಬಲವಂತದ ಕಾರ್ಮಿಕ ಪದ್ಧತಿ’.
ಪ್ರಮುಖ ಲಕ್ಷಣಗಳು: ಕೆಲಸಗಾರರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಇಟ್ಟುಕೊಳ್ಳುವುದು, ಕೂಲಿ ನೀಡದಿರುವುದು, ಗುರುತಿನ ಚೀಟಿಗಳನ್ನು ಕಸಿದುಕೊಳ್ಳುವುದು, ದೈಹಿಕ ಅಥವಾ ಮಾನಸಿಕ ಹಿಂಸೆ ನೀಡುವುದು ಮತ್ತು ಕೆಲಸ ಬಿಟ್ಟು ಹೋಗದಂತೆ ನಿರ್ಬಂಧಿಸುವುದು. ಇದು ಆಧುನಿಕ ಜಗತ್ತಿನ ಒಂದು ರೀತಿಯ ಗುಲಾಮಗಿರಿ ಎನಿಸಿಕೊಂಡಿದೆ.
ಅಮೆರಿಕದ ಪ್ರಕಾರ, ತನಿಖೆಗೊಳಪಟ್ಟ 60 ದೇಶಗಳು ತಮ್ಮ ಮಾರುಕಟ್ಟೆಗೆ ಬಲವಂತದ ಕಾರ್ಮಿಕರಿಂದ ತಯಾರಾದ ಸರಕುಗಳು ಪ್ರವೇಶಿಸದಂತೆ ತಡೆಯುವಲ್ಲಿ ಸೂಕ್ತ ಕಾನೂನುಗಳನ್ನು ಜಾರಿಗೆ ತಂದಿಲ್ಲ ಅಥವಾ ಇರುವ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲ.
ಅಮೆರಿಕದ ವಾಣಿಜ್ಯ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರ ಪ್ರಕಾರ, ಇಂತಹ ದೇಶಗಳಿಂದ ಬರುವ ಅಗ್ಗದ ಉತ್ಪನ್ನಗಳು ಅಮೆರಿಕದ ಸ್ಥಳೀಯ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿವೆ. ಅಮೆರಿಕದ ಕಾರ್ಮಿಕರು ನ್ಯಾಯಯುತ ವೇತನದೊಂದಿಗೆ ಸ್ಪರ್ಧಿಸಬೇಕಾದರೆ, ಇಂತಹ ಅಸಮಾನ ಪೈಪೋಟಿಯನ್ನು ತಡೆಯಬೇಕಿದೆ ಎಂದು ಅವರು ವಾದಿಸಿದ್ದಾರೆ.
ಅಮೆರಿಕದ ಸುಪ್ರೀಂ ಕೋರ್ಟ್ ಈ ಹಿಂದೆ ಜಾರಿಯಲ್ಲಿದ್ದ ಕೆಲವು ಸುಂಕಗಳನ್ನು ರದ್ದುಗೊಳಿಸಿದ ನಂತರ, ಟ್ರಂಪ್ ಆಡಳಿತವು ಈಗ ‘ಸೆಕ್ಷನ್ 301’ (Section 301) ಅಡಿಯಲ್ಲಿ ಈ ಹೊಸ ಸುಂಕಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ.








