ಬೀಜಿಂಗ್: “ನಾವಿಬ್ಬರೂ ಜಗತ್ತಿನ ಮಹಾಶಕ್ತಿಗಳು” ಎನ್ನುವ ಗಂಭೀರ ಸಂದೇಶದೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಚೀನಾ ರಾಜಧಾನಿ ಬೀಜಿಂಗ್‌ಗೆ ಬಂದಿಳಿದಿದ್ದಾರೆ. ಕಳೆದ ಒಂದು ದಶಕದಲ್ಲಿ ಅಮೆರಿಕ ಅಧ್ಯಕ್ಷರೊಬ್ಬರು ಚೀನಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಇಡೀ ಜಗತ್ತಿನ ಕಣ್ಣು ಈಗ ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಅವರ ಭೇಟಿಯ ಮೇಲಿದೆ.
ಶ್ವೇತಭವನದಿಂದ ಹೊರಡುವ ಮುನ್ನ ಮಾತನಾಡಿದ ಟ್ರಂಪ್, “ನಾವು ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳು. ಮಿಲಿಟರಿ ಶಕ್ತಿಯಲ್ಲಿ ನಾವೇ ಮೊದಲು, ಚೀನಾ ಎರಡನೇ ಸ್ಥಾನದಲ್ಲಿದೆ” ಎಂದು ಹೇಳುವ ಮೂಲಕ ತಮ್ಮ ಭೇಟಿಯ ಮಹತ್ವವನ್ನು ಸಾರಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇರಾನ್ ಜೊತೆ ನಡೆಯುತ್ತಿರುವ ಸಂಘರ್ಷ ಮತ್ತು ತೈಲ ಪೂರೈಕೆಯ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಇರಾನ್ ಮೇಲೆ ಪ್ರಭಾವ ಬೀರಲು ಟ್ರಂಪ್ ಚೀನಾದ ನೆರವು ಕೋರುವ ಸಾಧ್ಯತೆಯಿದೆ.
ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರಕ್ಕೆ ಅಂತ್ಯ ಹಾಡುವುದು ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹಂಚಿಕೆಯ ಕುರಿತು ಹೊಸ ಒಪ್ಪಂದಗಳಿಗೆ ಈ ಭೇಟಿ ಸಾಕ್ಷಿಯಾಗಲಿದೆ. ಟ್ರಂಪ್ ಅವರೊಂದಿಗೆ ಎಲಾನ್ ಮಸ್ಕ್ ಮತ್ತು ಟಿಮ್ ಕುಕ್ ಅವರಂತಹ ಪ್ರಮುಖ ಉದ್ಯಮಿಗಳೂ ಬೀಜಿಂಗ್‌ಗೆ ಆಗಮಿಸಿದ್ದಾರೆ.ಅಮೆರಿಕವು ತೈವಾನ್‌ಗೆ ನೀಡುತ್ತಿರುವ ಶಸ್ತ್ರಾಸ್ತ್ರಗಳ ಪೂರೈಕೆಯ ಕುರಿತು ಚೀನಾ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸೂಕ್ಷ್ಮ ವಿಷಯವೂ ಚರ್ಚೆಯ ವೇದಿಕೆಯಲ್ಲಿ ಸದ್ದು ಮಾಡಲಿದೆ.








