ಬೆಂಗಳೂರು : ಕಳೆದ ಒಂದು ವಾರಗಳ ಹಿಂದೆ ಅಂದರೆ ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ನಡೆದಿತ್ತು. ಇದೀಗ ವಾರದ ಬಳಿಕ ಮತ್ತೆ ಕೆಫೆ ಆರಂಭಗೊಳ್ಳುತ್ತಿದ್ದು ಈ ಕುರಿತಂತೆ ರಾಮೇಶ್ವರಂ ಕೆಫೆಯ ಸಿಇಓ ರಾಘವೇಂದ್ರ ರಾವ್ ರಾಷ್ಟ್ರಗೀತೆ ಹಾಡುವ ಮೂಲಕ ನಾಳೆ ಕೆಫೆಯನ್ನು ಮತ್ತೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ನಾಳೆ ಕೆಫೆ ಆರಂಭದ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡ ಅವರು, ರಾಮೇಶ್ವರಂ ಕೆಫೆಯಲ್ಲಿ ಇಂದು ಪೂಜಾ ಕಾರ್ಯಗಳು ನಡೆಯುತ್ತಿವೆ. ಹೀಗಾಗಿ ಕೆಫೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಇಂದು ಸಾಯಂಕಾಲ ಹೋಮ ಹವನಗಳು ನಡೆಯುತ್ತವೆ ಎಂದು ತಿಳಿಸಿದರು.
ಶಿವರಾತ್ರಿ ಪ್ರಯುಕ್ತ ರುದ್ರ ಹೋಮ ನವಗ್ರಹ ಹೋಮ ಮೃತ್ಯುಂಜಯ ಹೋಮ ವಾಸ್ತು ಹೋಮ ಲಕ್ಷ್ಮಿ ಪೂಜೆ ಗಣೇಶ ಪೂಜೆ ಹಮ್ಮಿಕೊಂಡಿದ್ದೇವೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಿ ಪರಮೇಶ್ವರ್ ಸೇರಿದಂತೆ ಆರ್ ಅಶೋಕ್ ಬಿ ವೈ ವಿಜಯೇಂದ್ರ ಪಿ ಸಿ ಮೋಹನ್ ಮಂಜುಳಾ ಅರವಿಂದ್ ಎಲ್ಲಾ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ನಾಳೆ ಬೆಳಿಗ್ಗೆ 6:30ಕ್ಕೆ ರಾಷ್ಟ್ರಗೀತೆ ಹಾಡಿ ಕೆಫೆ ಪ್ರಾರಂಭ ಮಾಡುತ್ತೇವೆ. ಪೊಲೀಸ್ ಇಲಾಖೆ ಕೆಲವು ಮುಂಜಾಗ್ರತ ಕ್ರಮಗಳನ್ನು ಸೂಚಿಸಿದೆ. ಅದರಂತೆ ಕೆಫೆಯ ಪ್ರವೇಶ ದ್ವಾರದಲ್ಲಿ ಎರಡು ಮೆಟಲ್ ಡಿಟೆಕ್ಟರ್ ಕೂಡ ಅಳವಡಿಕೆ ಮಾಡಲಾಗಿದೆ.