ಕಲಬುರ್ಗಿ : ವಿಪಕ್ಷ ನಾಯಕರು ನಮ್ಮ ಸರ್ಕಾರದಲ್ಲಿ ಭ್ರಷ್ಟಚಾರ ಆಗಿರುವ ಕುರಿತಂತೆ ಯಾವುದೇ ದಾಖಲೆ ಇದ್ದರು ಬಹಿರಂಗ ಪಡಿಸಲಿ. ಯಾವುದೇ ತನಿಖೆಗೆ ನಾವು ಸಿದ್ದರಿದ್ದೇವೆ. ತಮ್ಮ ಸರ್ಕಾರ ವಿಧಾನ ಸೌಧವನ್ನು ಪ್ರಜಾಸೌಧವಾಗಿ ಉಳಿಸಿಕೊಂಡಿದೆಯೇ ಹೊರತು ವ್ಯಾಪಾರ ಸೌಧವಾಗಿ ಪರಿವರ್ತಿಸಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇಂದು ಕಲಬುರಗಿಯಲ್ಲಿ ಪುನಃ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹಿಟ್ ಅಂಡ್ ರನ್ ಮಾಡೋದು ಬಿಟ್ಟು ತಮ್ಮ ಸರಕಾರ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ದಾಖಲೆಗಳಿದ್ದರೆ ಅವುಗಳನ್ನು ನಾಗಮೋಹನ್ ದಾಸ್ ಸಮಿತಿಗೆ ನೀಡಲಿ, ತನಿಖೆ ಆಗುತ್ತದೆ ಎಂದು ಹೇಳಿದರು.
ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನಾಗಮೋಹನ ದಾಸ್ ಸಮಿತಿ ರಚನೆ ಮಾಡಿದೆ, ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಲಾಗಿದೆ, ಎಫ್ ಐ ಆರ್ ಗಳಾಗಿವೆ ಮತ್ತು ಕೆಲ ಅರೆಸ್ಟ್ ಗಳು ಸಹ ಆಗಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಬಳಿ ದಾಖಲೆಗಳಿದ್ದರೆ ಸಮಿತಿಗೆ ನೀಡಲಿ ಎಂದು ಖರ್ಗೆ ಹೇಳಿದರು.
ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಕುರಿತು ಪೆನ್ ಡ್ರೈವ್ ಕೊಡಿ, ಹಾರ್ಡ್ ಡಿಸ್ಕ್ ಕೊಡಿ, ವೈಟ್ ಪೇಪರ್ ಕೊಡಿ, ಬ್ಲಾಕ್ ಪೇಪರ್ ಕೊಡಿ, ಸಿಡಿ ಕೊಡಿ, ಸಿಡಿ ಪ್ರಕರಣ ಕುರಿತಂತೆ ಅದು ಇನ್ನೂ ಕೋರ್ಟ್ ನಲ್ಲಿದೆ ಯಾರು ಅದಕ್ಕೆ ಸ್ಟೇ ಆರ್ಡರ್ ತಂದಿದ್ದಾರೆ. ಸಿಡಿಯನ್ನ ರಿಲೀಸ್ ಮಾಡಲು ತಯಾರಿದ್ದರು ಆದರೆ ಯಾರೋ ಕೋರ್ಟಿನಿಂದ ಅದಕ್ಕೆ ಸ್ಟೇ ತಂದಿದ್ದಾರೆ. ಯಾವುದೇ ದಾಖಲೆ ಇದ್ದರೂ ಕೊಡಿ ತನಿಖೆ ಮಾಡುವುದಕ್ಕೆ ನಮಗೆ ಸಂಪೂರ್ಣವಾಗಿ ತೆರೆದ ಮನಸ್ಸಿದೆ ಎಂದು ಸವಾಲು ಹಾಕಿದರು.