ಮಂಡ್ಯ : ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ನೀಡಿದ್ದಾರೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದರು. ಇಂದು ಮತ್ತೊಂದು ಹೊಸ ಬಾಂಬ್ ಸಿಡಿಸಿರುವ ಅವರು, ಆಪರೇಷನ್ ಕಮಲದ ಕುರಿತು ನಮ್ಮ ಬಳಿ ಸಾಕ್ಷಿ ಇದೆ ಬಿಜೆಪಿಯವರು ತೆಪ್ಪಗಿದ್ದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.
ಹೌದು ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತೆಪ್ಪಗಿರಬೇಕು, ನಮ್ಮತ್ರ ಸಾಕ್ಷಿ ಇದೆ. ಬಿಜೆಪಿಯಲ್ಲಿ ಸ್ವಲ್ಪ ಮಂದಿ ಬ್ರೋಕರ್ ಗಳಿದ್ದಾರೆ. ಅವರೇ ಸರ್ಕಾರ ಬೀಳಿಸುವುದಕ್ಕೆ ಟ್ರೈ ಮಾಡ್ತಿದ್ದಾರೆ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಟೀ ಕುಡಿಯೋದು ಹೊರಗೆ ಬಂದಿದೆ. ಊರಿಗೆ ಬಂದವರು ನೀರಿಗೆ ಬರಲ್ವಾ? ಹೀಗಿರುವಾಗ ಬಿಜೆಪಿಗರು ಆಪರೇಷನ್ ಕಮಲ ನಡೆಸುವ ದಾಖಲೆಗಳು ಕೂಡ ಹೊರಗೆ ಬಂದೇ ಬರುತ್ತದೆ ಎಂದರು.
ನನ್ನ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ದಾಖಲೆ ಇವೆ. ಈ ಕುರಿತಾಗಿ ಶೀಘ್ರದಲ್ಲೇ ಮಾಹಿತಿಯನ್ನು ನೀಡುತ್ತೇನೆ ಎಂದು ಅವರು ಹೇಳಿದರು. ಬಿಜೆಪಿ ಬ್ರೋಕರ್ ಗಳು ದಿನವೂ ಬಿಡ್ತಿಲ್ಲ, ಬನ್ನಿ ಬನ್ನಿ ಅಂತ ಬೆನ್ನು ಬಿದ್ದಿದ್ದಾರೆ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸೂಕ್ತ ದಾಖಲೆಗಳೊಂದಿಗೆ ಮಾಹಿತಿ ನೀಡ್ತೇವೆ ಎಂದರು.
ಈ ಹಿಂದೆ ಆಪರೇಷನ್ ಕಮಲ ಆದಾಗ 60 ಕೋಟಿ ಖರ್ಚು ಮಾಡಿದ್ರು. ಇವಾಗ ಭಾರೀ ಸತ್ಯವಂತರ ತರಹ ಮಾತಾಡ್ತಾರೆ ಬಿಜೆಪಿಯವರು. 30 ಕೋಟಿ ಕೈಗೆ ಕೊಟ್ಟು ಉಳಿದ 30 ಕೋಟಿಯನ್ನು ಚುನಾವಣೆಗೆ ಖರ್ಚು ಮಾಡಿದ್ರು ಅಂತ ಅವರೇ ಹೇಳಿದ್ದಾರೆ. ಈಗ ನಮ್ಮ ಬಳಿ ಆಪರೇಷನ್ ಕಮಲದ ಬಗ್ಗೆ ಸಾಕ್ಷಿ ಇದೆ. ಹೀಗಾಗಿ ಬಿಜೆಪಿಗರು ತೆಪ್ಪಗೆ ಇರಬೇಕು ಎಂದಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 100 ಕೋಟಿ ಆಫರ್ ನೀಡಿದೆ ಎಂದು ಆರೋಪಿಸಿದ ಬೆನ್ನಲ್ಲೆ ಶಾಸಕ ಗಣಿಗ ರವಿಕುಮಾರ್ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಆಪರೇಷನ್ ಕಮಲಕ್ಕೆ ಬಿಜೆಪಿ ನಾಯಕರು ಪ್ರಯತ್ನ ನಡೆಸುತ್ತಿಲ್ಲ. ಇವೆಲ್ಲಾ ಸುಳ್ಳು. ಹಾಗೇನಿದ್ದರೆ ಅದಕ್ಕೆ ಸೂಕ್ತ ದಾಖಲೆಯನ್ನು ನೀಡಿ ಎಂದು ಸವಾಲು ಹಾಕಿದ್ದರು.