ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಸಿದಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಇದೀಗ ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು,ಅಧಿಕಾರ ದಾಹದಿಂದ ನಮ್ಮ ಈ ಪಾದಯಾತ್ರೆ ಹಮ್ಮಿಕೊಂಡಿಲ್ಲ ಎಂದು ತಿಳಿಸಿದರು.
ಪಾದಯಾತ್ರೆಯ ನಾಲ್ಕನೇ ದಿಂನದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಇಂಥ ಬೃಹತ್ ಪಾದಯಾತ್ರೆಯನ್ನು ಯಾರೂ ಹಮ್ಮಿಕೊಂಡಿರಲಿಲ್ಲ. ಯಾವುದೇ ಅಧಿಕಾರ ದಾಹದಿಂದ ನಮ್ಮ ಈ ಪಾದಯಾತ್ರೆ ಹಮ್ಮಿಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸಿದ್ದರಾಮಯ್ಯನವರು ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ 1,200 ಕೋಟಿ ರೂ. ಹಾಗೇ ಉಳಿಸಿಕೊಂಡಿದ್ದಾರೆ. ನೋಂದಣಿ ಶುಲ್ಕ ಹೆಚ್ಚಾಗಿದೆ. ಅಕ್ಕಿ, ದವಸ ಧಾನ್ಯವೂ ದುಬಾರಿಯಾಗಿದೆ. 1,95,000 ಕೋಟಿ ಸಾಲವನ್ನು ಸಿದ್ದರಾಮಯ್ಯನವರ ಸರ್ಕಾರ ಮಾಡಿದೆ ಎಂದು ವಿಜಯೇಂದ್ರ ಟೀಕಿಸಿದರು.
ರಾಜ್ಯದ ಆರೂವರೆ ಕೋಟಿ ಜನರಿಗೆ ಚುನಾಯಿತ ಸರ್ಕಾರ ಇದೆ ಎಂದು ಅನಿಸುತ್ತಿಲ್ಲ. ಕಾಂಗ್ರೆಸ್ ಅನೇಕ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದೆ. ಕಳೆದ 14 ತಿಂಗಳಿನಲ್ಲಿ ರಾಜ್ಯದಲ್ಲಿ ವಿದ್ಯುತ್ ದರ ಏರಿಸಿದ್ದಾರೆ. ಹಾಲಿನ ದರ ಹೆಚ್ಚಿಸಿದರೂ ಅದರ ಪ್ರಯೋಜನ ರೈತರು, ಹೈನುಗಾರರಿಗೆ ಲಭಿಸಿಲ್ಲ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ಕೊಡುತ್ತಿತ್ತು ಎಂದು ವಿವರಿಸಿದರು.