ಬೆಂಗಳೂರು : ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬೆಂಗಳೂರಿಗೆ ಕಾವೇರಿ 5ನೇ ಹಂತದ ನೀರು ಯೋಜನೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟನೆ ಮಾಡಿದರು. ಈ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಈ ಯೋಜನೆಯ ಶೇಕಡ 80ರಷ್ಟು ಕೆಲಸ ನಾವೇ ಮಾಡಿದ್ದೇವೆ ಈಗ ಇವರು ಬಂದು ಉದ್ಘಾಟನೆ ಮಾಡಿದ್ದಾರೆ ಅಷ್ಟೇ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾನೇ ಎಲ್ಲಾ ಮಾಡಿಸಿದ್ದು ಎಂದು ನಿನ್ನೆ ಡಿಸಿಎಂ ಜಂಭ ಕೊಚ್ಚಿ ಕೊಂಡಿದ್ದಾರೆ. ಅವರು ಏನೇ ಹೇಳಿದರೂ ದಾಖಲೆಗಳು ಮಾತಾಡುತ್ತವೆ. ಯೋಜನೆ ಪ್ರಾರಂಭ ಆದಾಗ ಬಿಜೆಪಿ ಸರ್ಕಾರ ಇತ್ತು. ಅದರ 80% ಪ್ರತಿಶತ ಕೆಲಸವನ್ನು ನಾವೇ ಮಾಡಿದ್ದೇವೆ. ಇವರು ಬಂದು ಈಗ ಒಂದು ವರ್ಷ ಆಗಿದೆ. ದೇವರನ್ನು ಕೂರಿಸಿ ಹೋಮ ಹವನ ಮಾಡಿದ್ದು ನಾವು, ಮಂಗಳಾರತಿ ಸಮಯದಲ್ಲಿ ಇವರು ಬಂದು ನಮ್ಮದು ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.
ಇನ್ನು ಚನ್ನಪಟ್ಟಣ ಬೈ ಎಲೆಕ್ಷನ್ ಕುರಿತು ಮಾತನಾಡಿದ ಅವರು, ಚನ್ನಪಟ್ಟಣ ಸೇರಿದಂತೆ ಮೂರು ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡು ಮೂರು ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ. ಇವತ್ತು ಕೂಡ ಜೆಡಿಎಸ್ ನಾಯಕರ ಜೊತೆ ಚರ್ಚಿಸಿದ್ದೇವೆ. ಮೂರು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳು ಸ್ಫರ್ಧೆ ಮಾಡಲಿದ್ದಾರೆ. ಚನ್ನಪಟ್ಟಣದಲ್ಲಿ ನಾನೇ ಎನ್ಡಿಎ ಅಭ್ಯರ್ಥಿ ಎಂಬ ಸಿಪಿವೈ ಹೇಳಿಕೆ, ‘ಕುಮಾರಸ್ವಾಮಿ ಅವರನ್ನೂ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ. ಯೋಗೇಶ್ವರ್ ಅವರೇ ಅಭ್ಯರ್ಥಿ ಆಗಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದರು.