ಚಿಕ್ಕಮಗಳೂರು : “ನಮ್ಮ ಗ್ಯಾರಂಟಿ ಯೋಜನೆಗಳಿಗೆ ಐದು ವರ್ಷಗಳ ವಾರಂಟಿ ಇದೆ. ಇದಕ್ಕೆ ಅಗತ್ಯವಾದ ಅನುದಾನವನ್ನು ಬಜೆಟ್ ನಲ್ಲಿ ಇಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಶೃಂಗೇರಿಯ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು “ಫ್ಯಾನ್, ಕುಕ್ಕರ್ ಗಳಿಗೆ ಒಂದು ವರ್ಷದ ವಾರಂಟಿ ಇದ್ದರೆ, ನಮಗೆ ಜನ ಐದು ವರ್ಷಗಳ ವಾರಂಟಿ ನೀಡಿದ್ದಾರೆ. ಈ ವಾರಂಟಿಯನ್ನು 10 ವರ್ಷಗಳಿಗೆ ನೀಡುವಂತೆ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥಿಸುತ್ತಿದ್ದೇನೆ.
ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲ ಆಗುವುದಿಲ್ಲ. ಪ್ರಾರ್ಥನೆಗೆ ಫಲ ಖಂಡಿತವಾಗಿ ಸಿಗುತ್ತದೆ. ಹೀಗಾಗಿ ನಾನು ಧರ್ಮ ಯುದ್ಧ ಆರಂಭವಾಗುವ ಮುನ್ನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ನಮ್ಮ ಪಕ್ಷ ಹಾಗೂ ರಾಜ್ಯದ ಜನರ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ಈ ನಾಡು ಸುಭಿಕ್ಷವಾಗಲಿ, ಒಳ್ಳೆಯ ಆಡಳಿತ ನೀಡುವ ಶಕ್ತಿ ನೀಡಲಿ ಎಂದು ಕೇಳಿಕೊಂಡಿದ್ದೇನೆ. ನಾವು ನುಡಿದಂತೆ ನಡೆದಿರುವುದು ಕೂಡ ನಮ್ಮ ಪ್ರಾರ್ಥನೆಯ ಫಲ.”
ತಂಗಡಗಿ ಅವರನ್ನು ಲೀಡರ್ ಮಾಡುತ್ತಿದ್ದಾರೆ:
ಸಚಿವ ಶಿವರಾಜ್ ತಂಗಡಗಿ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಆಡುಭಾಷೆಯಲ್ಲಿ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿರಬಹುದು. ಇದೇನು ದೊಡ್ಡ ವಿಚಾರವಲ್ಲ. ತಂಗಡಗಿ ಅವರನ್ನು ದೊಡ್ಡ ಲೀಡರ್ ಆಗಿ ಮಾಡುತ್ತಿದ್ದಾರೆ, ಮಾಡಲಿ” ಎಂದರು.
ಸುರೇಶ್ ಪ್ರತಿ ಮನೆಗೂ ಗೊತ್ತು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಗ್ಗೆ ಕೇಳಿದಾಗ, “2013ರಲ್ಲೂ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮೂಲಕ ದೇವೇಗೌಡರ ಸೊಸೆಯನ್ನು ಕಣಕ್ಕಿಳಿಸಿದ್ದವು. ಆಗಲೂ ಇದೇ ಪರಿಸ್ಥಿತಿ ಇತ್ತು. ಆದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಸುರೇಶ್ ಅವರನ್ನು ಗೆಲ್ಲಿಸಿದ್ದರು. ಆಗಲೂ ಸಿದ್ದರಾಮಯ್ಯ ಅವರ ಸರ್ಕಾರ ಇತ್ತು. ಈಗ ಸುರೇಶ್ ಅವರು ಮಾಡಿರುವ ಜನಸೇವೆ ಕೂಡ ಅವರ ಬೆನ್ನಿಗೆ ಇದೆ. ಸುರೇಶ್ ಪ್ರತಿ ಪಂಚಾಯ್ತಿ ಸದಸ್ಯನಂತೆ ಕ್ಷೇತ್ರದ ಜನರ ಸೇವೆ ಮಾಡಿದ್ದಾರೆ. ಸುರೇಶ್ ಪ್ರತಿ ಮನೆಗೂ ಗೊತ್ತು. ಹೀಗಾಗಿ ಜನ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.