ಬೆಳಗಾವಿ : ಪ್ರವಾಸಕ್ಕೆ ತೆರಳಿದ್ದ ವೇಳೆ ಭಟ್ಕಳ ತಾಲೂಕು ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟಿರುವುದು ವಿಷಾದದ ಸಂಗತಿ. ಹಾಗೆಂದು ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಜೀವಹಾನಿ ಆದಲ್ಲಿ, ನಾವು ಜವಾಬ್ದಾರರಲ್ಲ ಎಂದು ಕೈಚೆಲ್ಲಲು ನಮ್ಮ ಸರ್ಕಾರ ಸಿದ್ದವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಸ್ಪಷ್ಟಪಡಿಸಿದರು.
ಶುಕ್ರವಾರ ವಿಧಾನಸಭೆ ಶೂನ್ಯ ವೇಳೆ ಚರ್ಚೆಯಲ್ಲಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮುರುಡೇಶ್ವರದಲ್ಲಿ ದುರಂತ ಸಾವಿಗೀಡಾದ ವಿದ್ಯಾರ್ಥಿನಿಯರ ಪ್ರಕರಣವನ್ನು ಉಲ್ಲೇಖಿಸಿದ್ದರು. ಹೆಚ್ಚಿನ ಜನ ಪ್ರವಾಸಕ್ಕೆ ಆಗಮಿಸುವ ಸ್ಥಳದಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು. ತಮ್ಮದೇ ಕ್ಷೇತ್ರದ ವಿದ್ಯಾರ್ಥಿನಿಯರ ದುರಂತ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿದರು.
ಈ ವೇಳೆ ಶಾಸಕ ಸಮೃದ್ಧಿ ಮಂಜುನಾಥ್ ಅವರಿಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಮುಳಬಾಗಿಲು ತಾಲೂಕಿನ ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರನ್ನು ಶಿಕ್ಷಕರು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಕ್ಕಳ ಜೊತೆ ಏಳು ಜನ ಶಿಕ್ಷಕರೂ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸದ ವೇಳೆ ಮಕ್ಕಳ ರಕ್ಷಣೆ ಶಿಕ್ಷಕರ ಜವಾಬ್ದಾರಿ. ಮಕ್ಕಳು ಸಮುದ್ರದ ಆಳವಾದ ಸ್ಥಳಕ್ಕೆ ಈಜಲು ತೆರಳಿದ್ದಾಗ ಶಿಕ್ಷಕರು ಕೂಡಲೇ ಅದನ್ನು ತಡೆಯಬೇಕಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಹೀಗಾಗಿ ಪ್ರಾಥನಿಕ ತನಿಖೆಯಲ್ಲಿ ಶಿಕ್ಷಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ” ಎಂದರು.
ಮುಂದುವರೆದು, “ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಜೀವಹಾನಿ ಆದಲ್ಲಿ, ನಾವು ಜವಾಬ್ದಾರರಲ್ಲ ಎಂದು ಕೈಚೆಲ್ಲಲು ನಮ್ಮ ಸರ್ಕಾರ ಸಿದ್ದವಿಲ್ಲ. ಹೀಗಾಗಿ ನಿರ್ಲಕ್ಷ್ಯ ವಹಿಸಿದ್ದ ಶಿಕ್ಷಕರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಹೆಚ್ಚಿನ ಜನ ಪ್ರವಾಸಕ್ಕೆ ಆಗಮಿಸುವ ಸ್ಥಳಕ್ಕೆ ಮತ್ತಷ್ಟು ಮುಂಜಾಗ್ರತಾ ಕ್ರಮ ವಹಿಸಬೇಕು ಎಂಬ ಸಮೃದ್ಧಿ ಮಂಜುನಾಥ್ ಅವರ ಸಲಹೆಯನ್ನೂ ಸ್ವೀಕರಿಸಲಾಗುವುದು. ಅಲ್ಲದೆ, ಈ ದುರಂತದ ಬಗ್ಗೆ ಶೀಘ್ರ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಸದನಕ್ಕೆ ಭರವಸೆ ನೀಡಿದರು.
ಏನಿದು ಪ್ರಕರಣ?
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮೊರಾರ್ಜಿ ವಸತಿ ಶಾಲಾ ಮಕ್ಕಳನ್ನು ಕಳೆದ ಡಿಸೆಂಬರ್ 10 ರಂದು ಶಿಕ್ಷಕರು ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಕ್ಕೆಂದು ಕರೆತಂದಿದ್ದರು. ಆದರೆ, ಸಮುದ್ರದ ಆಳವಾದ ಭಾಗದಲ್ಲಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನೀರು ಪಾಲಾಗಿ ಮೃತಪಟ್ಟಿದ್ದರು.
ದುರಂತದಲ್ಲಿ ವಿದ್ಯಾರ್ಥಿನಿಯರಾದ ದೀಕ್ಷಾ ಜೆ(15), ಲಾವಣ್ಯ (15) ವಂದನಾ (15) ಹಾಗೂ ಶ್ರಾವಂತಿ ಗೋಪಾಲಪ್ಪ (15) ಮೃತರಾಗಿದ್ದು. ವಿದ್ಯಾರ್ಥಿನಿಯರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಘೋಷಿಸಿದ್ದಾರೆ.