ರಾಮನಗರ : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆಗೆ ಒಳಪಡಿಸಲಿದ್ದಾರೆ. ಇದರ ಮಧ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ. ಹಾಗಾದರೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು? ಇಲ್ಲಿದೆ ವಿವರ
ರಾಮನಗರ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಸೇವೆ ಮಾಡಬೇಕು ಅಂತ ಅಂದುಕೊಂಡಿದ್ದೇನೆ. ಜೊತೆಗೆ ದೊಡ್ಡ ಹೋರಾಟವೂ ಕೂಡ ನಡೆಯುತ್ತಿದೆ ಈಗ ಮಾತನಾಡಿದರೆ ವಿವಿಧ ರೀತಿಯಲ್ಲಿ ಬಿಂಬಿಸುತ್ತಾರೆ. ಕನಕಪುರ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ರಾಜ್ಯದ ಸೇವೆ ಮಾಡಬೇಕು ಅಂತ ದೊಡ್ಡ ಪ್ರಯತ್ನ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು. ಹಾಗಾಗಿ ಮತ್ತೆ ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದರಾ ಎಂಬ ಅನುಮಾನ ದಟ್ಟವಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ಇದೀಗ ತೀವ್ರ ಕುತೂಹಲ ಮೂಡಿಸಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಬಾರಿ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಪದೇಪದೇ ಸ್ಪಷ್ಟನೆ ನೀಡಿದ್ದಾರೆ. ಅದು ಅಲ್ಲದೆ ವಿಪಕ್ಷಗಳು ಸಹ ಸಿದ್ದರಾಮಯ್ಯಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪಟ್ಟು ಹಿಡಿದಿವೆ. ಇದರ ಮಧ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಒಂದು ಹೇಳಿಕೆ ನೀಡಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.