ಬೆಂಗಳೂರು : ಕಳೆದ ವರ್ಷ ರಾಜ್ಯದಲ್ಲಿ ಮಳೆ ಬಾರದೆ ಇರುವುದರಿಂದ ರೈತರು ಸೇರಿದಂತೆ ರಾಜ್ಯದ ಜನತೆ ತೀವ್ರ ಬರ ಸಂಕಷ್ಟ ಎದುರಿಸಿತ್ತು. ಅಲ್ಲದೆ ಈ ಬಾರಿಯ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಹೆಚ್ಚುವ ಸಂಭವವಿದೆ.ಇದರ ಮಧ್ಯ ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ಸ್ಪೋಟಕ ವರದಿ ಬಹಿರಂಗವಾಗಿದೆ.
ಹೌದು ಕಾವೇರಿ, ಕೃಷ್ಣಾಸೇರಿದಂತೆ ರಾಜ್ಯದ ನದಿಗಳ ನೀರನ್ನು ಕುಡಿಯುವುದಕ್ಕೂ ಮುನ್ನ ಯೋಚಿಸುವ ಸ್ಥಿತಿ ಎದುರಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 12 ನದಿಗಳ ವಿವಿಧ ಭಾಗಗಳ ನೀರು ಸಂಗ್ರಹಿಸಿ ನಡೆಸಿದ ಪರೀಕ್ಷೆಯ ವರದಿ ಪರಿಗಣಿಸಿದರೆ ಈ ಸ್ಥಿತಿಯಿರುವುದಂತೂ ದಿಟ.
ಏಕೆಂದರೆ, ವರದಿಯಲ್ಲಿ ಬೆಚ್ಚಿ ಬೀಳಿಸುವಂತಹ ಅಂಶ ಪತ್ತೆಯಾಗಿದ್ದು, ಆ ನದಿಗಳ ನೀರನ್ನು ನೇರವಾಗಿ ಕುಡಿದರೆ ಗಂಟಲು, ಕಣ್ಣು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಅಪಾಯ ಎದುರಾಗುವುದು ಖಚಿತವಂತೆ ಹಾಗಂತ, ಇಡೀ ನದಿಗಳ ನೀರೇ ಅಪಾಯಕಾರಿ ಯಂತೇನಲ್ಲ, ಮಂಡಳಿಯು ಈ 12 ನದಿಗಳ ನಿರ್ದಿಷ್ಟ ತಾಣಗಳಲ್ಲಿನ ನೀರು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಆ ನೀರು ನಿಜಕ್ಕೂ ಆತಂಕ ಹುಟ್ಟಿಸುವಷ್ಟು ಕಲುಷಿತ ವಾಗಿರುವುದು ಗೋಚರಿಸಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯುರಾಜ್ಯದ ನದಿಗಳ ನೀರಿನ ಗುಣಮಟ್ಟದ ಕುರಿತಂತೆ ಕಾಲಕಾಲಕ್ಕೆ ಪರೀಕ್ಷೆ ನಡೆಸುತ್ತದೆ. ಅದಕ್ಕಾಗಿಯೇ ಸ್ಥಾಪಿಸಲಾಗಿರುವ ಮೇಲ್ವಿಚಾರಣಾ ಘಟಕ (ಮೊನಿಟ ರಿಂಗ್ ಸ್ಟೇಷನ್ಗಳಲ್ಲಿ ನೀರು ಸಂಗ್ರಹಿಸಿ ಅವುಗಳನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಅದರಂತೆ ಕಳೆದ ನವೆಂಬರ್‌ನಲ್ಲಿ ನಡೆಸಲಾದ ಪರೀಕ್ಷೆಯ ವರದಿಯಂತೆ ರಾಜ್ಯದ 12 ನದಿಗಳಲ್ಲಿನ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂಬ ವರದಿ ಬಂದಿದೆ.
ಅದರಲ್ಲೂ ಲಕ್ಷ್ಮಣತೀರ್ಥ, ಆರ್ಕಾವತಿ, ಕಬಿನಿ, ತಿಂಷಾ ನದಿಗಳ ನೀರು ಶುದ್ದೀಕರಿಸಿದ ನಂತರವೂ ಕುಡಿಯಲು ಹಾಗೂ ಬಳಕೆಗೆ ಯೋಗ್ಯವಲ್ಲ ಎಂದು ತಿಳಿಸಲಾಗಿದೆ. ಉಳಿದಂತೆ ನೇತ್ರಾವತಿ ನದಿ ನೀರನ್ನು ಶುದ್ದೀಕರಿಸಿ ಬಳಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಅದರಲ್ಲಿ ಟೋಟಲ್ ಕೋಲಿಫಾರ್ಮ್ ಪ್ರಮಾಣ 100 ಎಂಎಲ್ ನೀರಿನಲ್ಲಿ 10 ಯುನಿಟ್ ಗಿಂತ ಕಡಿಮೆಯಿರಬೇಕು.
ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷಾ ವರದಿಯಲ್ಲಿರುವಂತೆ ಗಾಣಗಾಪುರ ಗ್ರಾಮದ ಬಳಿಯಲ್ಲಿ ಸಂಗ್ರಹಿಸಲಾದ ಭೀಮಾ ನದಿಯ ನೀರಿನಲ್ಲಿ 2.80 ಲಕ್ಷಯುನಿಟ್ ಇದೆ. 38 ಪರೀಕ್ಷಾ ಘಟಕಗಳಲ್ಲಿಯೂ ಟಿಸಿ ಪ್ರಮಾಣ ಭಾರೀ ಹೆಚ್ಚಳವಿದ್ದು, ಆನೀರನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅದರಲ್ಲೂ ದೃಷ್ಟಿ ದೋಷ, ಗಂಟಲು, ಉಸಿರಾಟದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ