ಬೆಂಗಳೂರು : ಅಂತರ್ಜಾಲದ ಮೂಲಕ ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಅಪರಾಧವಾಗುವುದಿಲ್ಲ ಎಂಬುದಾಗಿ ಜಲೈ 10ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಹಿಂಪಡೆದಿದೆ.
ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67B(b)ಯಲ್ಲಿ ತಿಳಿಸಿರುವಂತೆ, ಯಾವುದೇ ವ್ಯಕ್ತಿಯು ಮಕ್ಕಳ ಆಶ್ಲೀಲ ಚಿತ್ರಗಳನ್ನು ಸಿದ್ಧಪಡಿಸುವುದು ಮತ್ತು ಅದನ್ನು ವಿದ್ಯುನ್ಮಾನ ಉಪಕರಣಗಳ ಮೂಲಕ ಹಂಚಿಕೊಳ್ಳುವುದಕ್ಕೆ ಶಿಕ್ಷೆ ವಿಧಿಸಲು ಅವಕಾಶವಿದೆ. ಅರ್ಜಿದಾರರು ಮಕ್ಕಳ ಆಶ್ಲೀಲ ಚಿತ್ರಗಳನ್ನು ಸಿದ್ಧಪಡಿಸಿಲ್ಲ. ಜೊತೆಗೆ, ಅದನ್ನು ಯಾರೊಂದಿಗೂ ಹಂಚಿಕೊಂಡಿಲ್ಲ, ಕೇವಲ ವೀಕ್ಷಿಸಿದ್ದಾರೆ. ಹೀಗಾಗಿ, ಸೆಕ್ಷನ್ 67B(b) ಅಡಿ ಅಪರಾಧವಾಗುವುದಿಲ್ಲ ಎಂದು ನ್ಯಾಯಪೀಠ ಈ ಹಿಂದೆ ತಿಳಿಸಿತ್ತು.
ಅರ್ಜಿದಾರರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67B(b) ಅಡಿ ಪ್ರಕರಣ ದಾಖಲಾಗಿದ್ದು, ಈ ಸೆಕ್ಷನ್ ಮಕ್ಕಳ ಆಶ್ಲೀಲ ಚಿತ್ರಗಳನ್ನು ಅಂತರ್ಜಾಲದಲ್ಲಿ ಹುಡುಕುವುದು, ವೀಕ್ಷಿಸುವುದು, ಡೌನ್‌ಲೋಡ್ ಮಾಡುವುದು ಹಾಗೂ ಪ್ರಚಾರ ಮಾಡುವುದೂ ಸೇರಿದೆ. ಆದ್ದರಿಂದ ಸೆಕ್ಷನ್ 67B(b) ಪ್ರಕಾರ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಪಡಿಸಲು ಅವಕಾಶವಿಲ್ಲ. ಹೀಗಾಗಿ, ಆದೇಶ ಹಿಂಪಡೆಯುತ್ತಿರುವುದಾಗಿ ಪೀಠ ಹೇಳಿದೆ.
ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆ ಮಾಡಿದ ಆರೋಪದಲ್ಲಿ ದಾಖಲಾದ ಪ್ರಕರಣ ರದ್ದು ಕೋರಿ ಹೊಸಕೋಟೆಯ ಎನ್.ಇನಾಯತುಲ್ಲಾ ಎಂಬುವರು ಸಲ್ಲಿಸಿದ್ದ ಅರ್ಜಿಯ ಕುರಿತ ಆದೇಶವನ್ನು ಹಿಂಪಡೆಯಲು ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಜುಲೈ 10ರಂದು ಪ್ರಕಟಿಸಿರುವ ಆದೇಶ ದೋಷಪೂರಿತವಾಗಿದೆ ಎಂದು ತಿಳಿಸಿದೆ.