ಮುಂಬೈ: ಮುಂಬೈ ಸಮೀಪದ ಉಲ್ಲಾಸ್ ನಗರದಲ್ಲಿರುವ ಎತ್ತರದ ಕಟ್ಟಡದ ಬಾಲ್ಕನಿಗಳನ್ನು ಗುರಿಯಾಗಿಸಿಕೊಂಡು ಯುವಕನೊಬ್ಬನೊಬ್ಬ ರಾಕೆಟ್ಗಳನ್ನು ಬಿಟ್ಟಿರುವ ಘಟನೆ ನಡೆದಿದೆ.
ಯುವಕನೊಬ್ಬ ಜನರ ಮನೆಯ ಮೇಲೆ ದೀಪಾವಳಿ ರಾಕೆಟ್ಗಳನ್ನು ಹಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕ್ಲಿಪ್ನಲ್ಲಿ ಯುವಕ ಎತ್ತರದ ಕಟ್ಟಡದ ಕಿಟಕಿಗಳು ಮತ್ತು ಬಾಲ್ಕನಿಗಳನ್ನು ಗುರಿಯಾಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಕೆಲವು ಪಟಾಕಿಗಳು ಗೋಡೆ ಮತ್ತು ಹವಾನಿಯಂತ್ರಣಗಳ ಹೊರಾಂಗಣ ಘಟಕಗಳಿಗೆ ಅಪ್ಪಳಿಸಿದರೆ, ಮತ್ತೆ ಕೆಲವು ಬಾಲ್ಕನಿಗಳ ಮೂಲಕ ನೇರವಾಗಿ ಜನರ ಮನೆಯೊಳಗೆ ಹೋದವು ಎನ್ನಲಾಗಿದೆ.
ಉಲ್ಲಾಸನಗರ (ಪೂರ್ವ)ದ ಶಹಾದ್ ಪ್ರದೇಶದ ಗೋಲ್ ಮೈದಾನದ ಬಳಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಯುವಕರು ಉದ್ದೇಶಪೂರ್ವಕವಾಗಿ ಹೀರಾ ಪನ್ನಾ ಕಟ್ಟಡವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ವೀಡಿಯೊ ವೈರಲ್ ಆದ ನಂತರ, ಥಾಣೆ ಪೊಲೀಸರು ಈಗ ಅಪರಿಚಿತ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ಐಪಿಸಿ ಸೆಕ್ಷನ್ 285 (ಬೆಂಕಿ ಅಥವಾ ದಹನಕಾರಿ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ), 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಮತ್ತು 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.