ಬೆಂಗಳೂರು : ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತದಾನವು ಇಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆ ವರೆಗೂ ನಡೆಯಲಿದ್ದು, ಮತಗಟ್ಟೆಗಳ 200 ಮೀಟರ್ ಒಳಗೆ ಚುನಾವಣೆ ಪ್ರಚಾರ ನಿಷೇಧಿಸಲಾಗಿದೆ.
200 ಮೀಟರ್ ವ್ಯಾಪ್ತಿಯಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಮತದಾನ ಶಾಂತಿಯುತ ಮತ್ತು ಸುಸೂತ್ರವಾಗಿ ನಡೆಯುವಂತೆ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. 144 ಜಾರಿಗೊಳಿಸಿದ್ದು, ಚುನಾವಣಾ ಸಿಬ್ಬಂದಿ ಹೊರತುಪಡಿಸಿ 5 ಜನಕ್ಕಿಂತ ಹೆಚ್ಚು ಗುಂಪಾಗಿ ಸೇರುವಂತಿಲ್ಲ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993ರ ನಿಯಮ 36 ರನ್ವಯ ಮತದಾನ ದಿನದಂದು ಸಂತೆ, ಜಾತ್ರೆ, ಉತ್ಸವ ಹಾಗೂ ಉರುಸ್‍ಗಳನ್ನು ಸಹ ನಿಷೇಧಿಸಲಾಗಿದೆ.
ಮತದಾನ ದಿನದಂದು ರಾಜಕೀಯ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತದಾರರನ್ನು ವಾಹನದಲ್ಲಿ ಕೂರಿಸಿಕೊಂಡು ಮತಗಟ್ಟೆಗೆ ತರುವುದಾಗಲಿ ಅಥವಾ ಮತಗಟ್ಟೆಯಿಂದ ಮನೆಗೆ ಬಿಡುವಂತ ಯಾವುದೇ ಸೇವೆ ನೀಡುವಂತಿಲ್ಲ. ಇದನ್ನು ಉಲ್ಲಂಘಿಸಿದಲ್ಲಿ ಎಫ್.ಐ.ಆರ್. ದಾಖಲಿಸಲಾಗುವುದು.
ಮೊಬೈಲ್ ಫೋನ್ ನಿಷೇಧ:
ಮತದಾನಕ್ಕಾಗಿ ಆಗಮಿಸುವ ಮತದಾರರಿಗೆ ಮತಗಟ್ಟೆ ಕೇಂದ್ರಗಳ ಒಳಗಡೆ ಮೊಬೈಲ್ ಫೋನ್‍ನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೇ ಮತಗಟ್ಟೆ ಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಪೇಜರ್, ಕ್ಯಾಲ್ಕುಲೇಟರ್ ಸೇರಿದಂತೆ ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ.
ಪರ್ಯಾಯ ದಾಖಲೆ ತೋರಿಸಿ ಮತ ಚಲಾಯಿಸಿ:
ಮತದಾನ ಮಾಡಲು ಭಾವಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್) ಹೊಂದಿಲ್ಲದಿದ್ದರೂ ಆಧಾರ್ ಕಾರ್ಡ್, ಎಮ್.ಎನ್.ಆರ್.ಇ.ಜಿ.ಎ. (ಒಓಖಇಉಂ) ಜಾಬ್ ಕಾರ್ಡ್, ಬ್ಯಾಂಕ್ ಮತು ಅಂಚೆ ಕಚೇರಿಗಳು ನೀಡುವ ಭಾವಚಿತ್ರವುಳ್ಳ ಪಾಸ್‍ಬುಕ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಎನ್‍ಪಿಆರ್ ಅಡಿ ಆರ್‍ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್‍ಪೋರ್ಟ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ, ರಾಜ್ಯ/ ಕೇಂದ್ರ ಸರ್ಕಾರ/ ಸಾರ್ವಜನಿಕ ಉದ್ಯಮಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ನೀಡುವ ಭಾವಚಿತ್ರವುಳ್ಳ ಸೇವಾ ಗುರುತಿನ ಚೀಟಿ, ಸಂಸದರು, ವಿಧಾನಸಭಾ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಚೀಟಿ ಹಾಗೂ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿರುವ ವಿಶಿಷ್ಟ ಅಂಗವೈಕಲ್ಯ ಐಡಿ (ಯುಡಿಐಡಿ) ಕಾರ್ಡ್ ತೋರಿಸಿ ಮತ ಚಲಾಯಿಸಬಹುದಾಗಿದೆ.
ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ:
ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸುವ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಾಕಲಾಗುತ್ತದೆ.