ಬೆಂಗಳೂರು: ನಗರದಲ್ಲಿ ನಡೆದ ವೋಟರ್ ಐಡಿ ಪರಿಷ್ಕರಣೆಯಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
ಚಿಲುಮೆ ಸಂಸ್ಥೆ ಸರ್ಕಾರಿ ಸಂಸ್ಥೆಗಳ ಬಿಎಲ್ಒಗಳಿಗೂ ಹಣ ಪಾವತಿಸಿ, ಮತದಾರರ ಮಾಹಿತಿ ಸಂಗ್ರಹಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಚಿಲುಮೆ ಸಂಸ್ಥೆಗೆ ಮತದಾರರಿಗೆ ಅರಿವು ಮೂಡಿಸಲು ಮಾತ್ರ ಅನುಮತಿ ನೀಡಲಾಗಿತ್ತು. ಈ ಕೆಲಸವನ್ನು ಉಚಿತವಾಗಿ ಮಾಡಿಕೊಡುವುದಾಗಿ ಒಪ್ಪಿಕೊಂಡಿತ್ತು.ಆದರೆ ಇದೀಗ ಚಿಲುಮೆ ಸಂಸ್ಥೆ ಬಿಎಲ್ಒಗಳಿಗೆ ಹಣ ನೀಡಿ ಮಾಹಿತಿ ಸಂಗ್ರಹಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಮತದಾರರ ಮಾಹಿತಿ ಸಂಗ್ರಹಣೆಗೆ 1 ವೋಟರ್ ಐಡಿಗೆ 25 ರೂ. ಹೊಸ ವೋಟರ್ ಐಡಿ ಮಾಹಿತಿ ನೀಡಿದರೆ 13 ರೂಪಾಯಿ ನಿಗದಿ ಮಾಡಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಸರ್ಕಾರದಿಂದ ಬಿಎಲ್ಒಗಳಿಗೆ ವಾರ್ಷಿಕ 6 ಸಾವಿರ ಗೌರವಧನ ನೀಡಲಾಗುತ್ತದೆ. ಹೀಗಾಗಿ ಇದರಿಂದ ಅಸಮಾಧಾನಗೊಂಡಿದ್ದರು. ಹಾಗೇ ಬಿಎಲ್ಒಗಳು ಫೀಲ್ಡ್ಗೆ ಬಾರದಂತೆ ಚಿಲುಮೆ ಸಂಸ್ಥೆ ಬಿಎಲ್ಒಗಳಿಗೆ ಸೂಚಿಸಿತ್ತು.
ಇಷ್ಟೇ ಅಲ್ಲದೇ ಚಿಲುಮೆ ಬಿಎಲ್ಒಗಳ ಯೂಸರ್ ನೇಮ್, ಪಾಸ್ವರ್ಡ್ ಪಡೆದಿತ್ತು. ಇದರಿಂದ ಮತದಾರರ ಐಡಿ ಡಿಲೀಟ್, ಹೊಸ ಮತದಾರರನ್ನು ಸೇರ್ಪಡೆ ಮಾಡುತ್ತಿತ್ತು. ಚಿಲುಮೆ ಸಂಸ್ಥೆ ಮತದಾರನ ಹೆಸರು, ವೋಟರ್ ಐಡಿ ನಂಬರ್, ಮನೆ ನಂಬರ್, ಬೂತ್ ನಂಬರ್ ಸೇರಿ ಎಲ್ಲಾ ಮಾಹಿತಿ ಸಂಗ್ರಹಿಸುತ್ತಿತ್ತು.