ನವದೆಹಲಿ : ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಸಹೋದರ ವಿನೋದ್ ಸೆಹ್ವಾಗ್ ಅರೆಸ್ಟ್ ಆಗಿದ್ದಾರೆ.ಹರಿಯಾಣ ಪೊಲೀಸರು ಇಂದು ಮಣಿಮಾಜ್ರಾ ಠಾಣಾ ವ್ಯಾಪ್ತಿಯಲ್ಲಿ ವಿನೋದ್ ಸೆಹ್ವಾಗ್ ಅವರನ್ನು ಬಂಧಿಸಿದ್ದಾರೆ.
ಹೌದು ವಿನೋದ್ ಹರಿಯಾಣದ ಚಂಡೀಗಢ ಬಳಿ ಕೂಲ್ ಡ್ರಿಂಕ್ಸ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ವಿನೋದ್ ಮತ್ತು ಆತನ ಪಾಲುದಾರರು ಹಿಮಾಚಲ ಪ್ರದೇಶದಲ್ಲಿರುವ ನೈನಾ ಪ್ಲಾಸ್ಟಿಕ್ ಕಾರ್ಖಾನೆಯಿಂದ ತಂಪು ಪಾನೀಯ ತುಂಬುವ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿ 7 ಕೋಟಿ ರೂ ಮೊತ್ತದ ಚೆಕ್‌ಗಳನ್ನು ನೀಡಿದ್ದರು. ಆದರೆ ಚೆಕ್ ಕ್ಯಾಷ್ ಆಗದೆ ಬೌನ್ಸ್ ಆಗಿದ್ದವು.
ಈ ಕುರಿತು ವಿನೋದ್ ಸೆಹ್ವಾಗ್ ವಿರುದ್ಧ ನ್ಯಾಯಾಲಯದಲ್ಲಿ 7 ಕೋಟಿ ರೂ.ಗಳ ಚೆಕ್ ಬೌನ್ಸ್ ಪ್ರಕರಣ ನಡೆಯುತ್ತಿದೆ. ಈ ಪ್ರಕರಣದಲ್ಲಿ ಅವರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ಆದರೆ ಅವರು ಹಾಜರಾಗದ ಕಾರಣ, ನ್ಯಾಯಾಲಯ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿತು.
ನ್ಯಾಯಾಲಯವು ವಿನೋದ್ ಸೆಹ್ವಾಗ್ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿದ ತಕ್ಷಣ, ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯಕ್ಕೆ ಹಾಜರಾದ ನಂತರ ವಿನೋದ್ ಸೆಹ್ವಾಗ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ವಿನೋದ್ ಸೆಹ್ವಾಗ್ ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಯಲಿದೆ.