ಬಲ್ಲಿಯಾ: ಸಾಮಾನ್ಯವಾಗಿ ಮದುವೆಗಳಲ್ಲಿ ವರದಕ್ಷಿಣೆ ಅಥವಾ ಇತರ ಗಂಭೀರ ಕಾರಣಗಳಿಗೆ ಮದುವೆ ನಿಂತುಹೋಗುವುದನ್ನು ಕೇಳಿದ್ದೇವೆ. ಆದರೆ, ಕೇವಲ ಒಂದು ಸೀರೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ವಧುವೊಬ್ಬಳು ಮದುವೆಯನ್ನೇ ನಿಲ್ಲಿಸಿದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ಸಣ್ಣ ವಿಚಾರ ಅಂತಿಮವಾಗಿ ಎರಡೂ ಕುಟುಂಬಗಳ ನಡುವಿನ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿದೆ.
ನಡೆದಿದ್ದೇನು?
ರೇವತಿ ಪೊಲೀಸ್ ಠಾಣಾ ವ್ಯಾಪ್ತಿಯ ಗಾಯ್ಘಾಟ್ ಗ್ರಾಮದ ಪಂಚರುಖಿ ದೇವಿ ದೇವಸ್ಥಾನದಲ್ಲಿ ಮೇ 11 ರಂದು ವಿಶಾಲ್ ಗೊಂಡ್ ಮತ್ತು ನಿಕಿ ಎಂಬುವವರ ವಿವಾಹ ನಿಶ್ಚಯವಾಗಿತ್ತು. ವರನ ಕಡೆಯವರು ಅದ್ಧೂರಿಯಾಗಿ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ್ದರು. ಮದುವೆಯ ವಿಧಿವಿಧಾನಗಳು ಆರಂಭವಾಗುವ ಮುನ್ನ, ಸಂಪ್ರದಾಯದಂತೆ ವರನ ಕುಟುಂಬದವರು ವಧುವಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದರು.
ಸೀರೆ ವಿಚಾರಕ್ಕೆ ಶುರುವಾದ ಕಿರಿಕ್
ವರನ ಕಡೆಯವರು ತಂದ ಸೀರೆ ತನಗೆ ಇಷ್ಟವಾಗಿಲ್ಲ ಮತ್ತು ಅದು ತನ್ನ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ ಎಂದು ವಧು ನಿಕಿ ತಗಾದೆ ತೆಗೆದಿದ್ದಾಳೆ. ಅಷ್ಟೇ ಅಲ್ಲದೆ, ಈ ಸೀರೆ ಉಟ್ಟು ನಾನು ಮದುವೆಯಾಗುವುದಿಲ್ಲ ಎಂದು ಹಠ ಹಿಡಿದು ಕೂತಿದ್ದಾಳೆ. ಕುಟುಂಬದವರು ಎಷ್ಟೇ ಮನವೊಲಿಸಲು ಯತ್ನಿಸಿದರೂ ವಧು ಮಾತ್ರ ತನ್ನ ಪಟ್ಟು ಸಡಿಲಿಸಲಿಲ್ಲ.
ಕೈಕೈ ಮಿಲಾಯಿಸಿದ ಕುಟುಂಬಸ್ಥರು
ಮಾತು ಬೆಳೆದು ಎರಡು ಕುಟುಂಬಗಳ ನಡುವೆ ವಾಗ್ವಾದ ತಾರಕಕ್ಕೇರಿತು. ಇದು ಕೇವಲ ಮಾತಿಗೆ ಸೀಮಿತವಾಗದೆ ದೊಡ್ಡ ಗಲಾಟೆಯಾಗಿ ರೂಪಾಂತರಗೊಂಡಿತು. ಈ ಘರ್ಷಣೆಯಲ್ಲಿ ವರನ ತಾಯಿ, ಸಹೋದರ ಸೇರಿದಂತೆ ಮತ್ತೊಬ್ಬ ಮಹಿಳೆಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಪೊಲೀಸ್ ಎಂಟ್ರಿ ಮತ್ತು ಕೇಸ್
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಡಿಎಸ್ಪಿ ಮೊಹಮ್ಮದ್ ಫಹೀಮ್ ಖುರೇಷಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ವಧುವಿನ ತಂದೆ ನೀಡಿದ ದೂರಿನ ಮೇರೆಗೆ ವರ ವಿಶಾಲ್ ಮತ್ತು ಆತನ ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.








