ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ – 4ರ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ನ ಕಾಮಗಾರಿಗಳನ್ನು ಡಿಸೆಂಬರ್ ರೊಳಗೆ ಪೂರ್ಣಗೊಳಿಸಿ, ಭಾರೀ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಆರ್. ಮಂಜುನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಪೀಣ್ಯ ಎಲಿವೇಟೆಡ್ ಫ್ಲೈ ಓವರ್ನಲ್ಲಿ ನೀರು ನಿಲ್ಲುವುದನ್ನು ಕಂಡು ಡ್ರೈನೇಜ್ಗಳ ಕಾರ್ಯಕ್ಷಮತೆ ಕುರಿತು ಪರಿವೀಕ್ಷಣೆ ನಡೆಸಿದ ಸಂದರ್ಭದಲ್ಲಿ ನಾಲ್ಕು pre-stressed cable ಗಳು ಹಾನಿಗೊಳಗಾಗಿರುವುದು ಕಂಡು ಬಂದಿದ್ದರಿಂದ ಡಿಸೆಂಬರ್ 25, 2021 ರಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಐಐಎಸ್ಸಿ ಬೆಂಗಳೂರು ಇವರ ವರದಿಯ ಆಧಾರದ ಮೇಲೆ ಫೆಬ್ರವರಿ 16, 2022 ರಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದರು.
ಫ್ಲೈ ಓವರ್ನ ರಚನಾತ್ಮಕ ಸುಸ್ಥಿಯ ಕುರಿತು ಹಲವು ಪರೀಕ್ಷೆಗಳು ನಡೆಯುತ್ತಿದ್ದು, ತಜ್ಞರ ಸಮಿತಿಯಿಂದ ಸಲಹೆಗಳನ್ನು ಪಡೆದು, ಕೇಬಲ್ಗಳನ್ನು ಬಲಪಡಿಸಿದ ನಂತರ ಎಲ್ಲಾ ತರಹದ ವಾಹನಗಳನ್ನು ಫ್ಲೈ ಓವರ್ ಮೇಲೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸದನಕ್ಕೆ ಮಾಹಿತಿ ನೀಡಿದರು.