ಮೈಸೂರು : ಮೈಸೂರು ಜಿಲ್ಲೆಯ ನಂಜನಗೂಡು ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಾಲ್ವರು ಬಿಜೆಪಿ ನಗರಸಭಾ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಆದೇಶಿಸಿದ್ದಾರೆ.
ನಂಜನಗೂಡು ನಗರದ ವಾರ್ಡ್ ನಂಬರ್ 1ನೇ ಸದಸ್ಯ ಟಿ.ಎಂ.ಗಿರೀಶ್ ಕುಮಾರ್, ವಾರ್ಡ್ ಸಂಖ್ಯೆ 12 ಸದಸ್ಯೆ ಗಾಯತ್ರಿ, ವಾರ್ಡ್ ನಂಬರ್ 22 ಸದಸ್ಯೆ ಮೀನಾಕ್ಷಿ ನಾಗರಾಜು, ವಾರ್ಡ್ ಸಂಖ್ಯೆ 27ರ ಸದಸ್ಯೆ ವಿಜಯಲಕ್ಷ್ಮೀ ಎಂಬವರನ್ನು ವಿಪ್ ಉಲ್ಲಂಘಿಸಿರುವುದರಿಂದ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅಧಿನಿಯಮ 1987 ಸೆಕ್ಷನ್ 3(1)(b) ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ನಂಜನಗೂಡು ನಗರಸಭೆಯಲ್ಲಿ ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಬಹುಮತ ಪಡೆದಿದ್ದು, ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸದಸ್ಯರಾದ ಟಿ.ಎಂ.ಗಿರೀಶ್ ಕುಮಾರ್, ಗಾಯಿತ್ರಿ, ಮೀನಾಕ್ಷಿ ಹಾಗೂ ವಿಜಯಲಕ್ಷ್ಮಿ ತಮ್ಮ ಪಕ್ಷ ನೀಡಿದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀಕಂಠ ಗೆಲುವು ಸಾಧಿಸಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿದ್ದ ಬಿಜೆಪಿಯ ಈ ನಾಲ್ವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕಳೆದ ವರ್ಷ 29/10/2024ರಲ್ಲಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎರಡೂ ಕಡೆಯ ವಾದ ಆಲಿಸಿ ನಗರಸಭೆಯ ಅವಧಿ ಇನ್ನೂ ನೂರು ದಿನ ಇರುವಾಗಲೇ ನಾಲ್ವರ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ್ದಾರೆ.