ಬೆಳಗಾವಿ: ಬುರುಡೆ ಗ್ಯಾಂಗ್ ನವರು ಎಷ್ಟು ತಪ್ಪಿತಸ್ಥರೋ, ಅವರಿಗೆ ಹಣಕಾಸು ವ್ಯವಸ್ಥೆ ಮಾಡಿದವರು, ಈ ಷಡ್ಯಂತ್ರದ ರೂವಾರಿಗಳು, ಸೂತ್ರಧಾರಿಗಳ ಕುರಿತು ಬೆಳಕು ಚೆಲ್ಲಬೇಕು. ಈ ಸಂಬಂಧ ಎಸ್‍ಐಟಿ ತನಿಖಾ ವರದಿ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ಬುರುಡೆ ಗ್ಯಾಂಗಿನಿಂದ ನಾಡಿನ ಧಾರ್ಮಿಕ ಶ್ರದ್ಧೆ ಕುರಿತು ಅನುಮಾನ ಹುಟ್ಟಿಸುವ ಕಾರ್ಯ ಆಗಿದೆ. ಇದೆಲ್ಲದರ ಬಗ್ಗೆ ರಾಜ್ಯ ಸರಕಾರವು ಎಸ್‍ಐಟಿ ತನಿಖೆ ನಡೆಯುತ್ತಿದೆ ಎಂದು ಕೈಕಟ್ಟಿ ಕೂತರೆ ಆಗುವುದಿಲ್ಲ ಎಂದು ಆಕ್ಷೇಪಿಸಿದರು.
ಧರ್ಮಸ್ಥಳದ ವಿಚಾರದಲ್ಲಿ ಪಾತ್ರಧಾರಿಗಳಷ್ಟೇ ಬಹಿರಂಗವಾಗಿದ್ದಾರೆ. ಆದರೆ, ಸೂತ್ರಧಾರಿಗಳ ಬಗ್ಗೆ ಏನು ಎಂಬುದಾಗಿ ರಾಜ್ಯದ ಜನರು ಕೇಳುತ್ತಿದ್ದಾರೆ. ಸೂತ್ರಧಾರಿಗಳು ಮುಖ್ಯಮಂತ್ರಿಗಳ ಸುತ್ತ ಇದ್ದಾರೆಂದು ರಾಜ್ಯದ ಜನರು ಮಾತನಾಡುತ್ತಿದ್ದಾರೆ ಎಂದು ಗಮನ ಸೆಳೆದರು. ಇದರ ಬಗ್ಗೆ ಎಸ್‍ಐಟಿ ತನಿಖಾ ವರದಿಯನ್ನು ತಕ್ಷಣ ನೀಡಬೇಕೆಂದು ಒತ್ತಾಯಿಸಿದರು. ಖುಷಿ ಬಂದಂತೆ ನಿಧಾನಗತಿಯ ತನಿಖೆ ಸರಿಯಲ್ಲ ಎಂದು ಟೀಕಿಸಿದರು.
ಆ ಮುಖಗಳನ್ನು ನೋಡಿ ಸರಕಾರಕ್ಕೆ ಜ್ಞಾನೋದಯ ಆಗಬೇಕಿತ್ತು..
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಮುಂದಾದ ಆ ಮುಖಗಳನ್ನು ನೋಡಿ ಸರಕಾರಕ್ಕೆ ಜ್ಞಾನೋದಯ ಆಗಬೇಕಿತ್ತು. ಒಬ್ಬರಿಗಿಂತ ಒಬ್ಬರು ಸುಪಾರಿ ಕಿಲ್ಲರ್‍ಗಳಂತೆ ಕಾಣುತ್ತಿದ್ದರು ಎಂದು ದೂರಿದರು. ಇಂಥ ಅಯೋಗ್ಯರ ಮಾತನ್ನು ಕಟ್ಟಿಕೊಂಡು ಎಸ್‍ಐಟಿ ತನಿಖೆ ಮಾಡಿದ ಸರಕಾರ ಈಗೇನು ಹೇಳುತ್ತದೆ ಎಂದು ಕೇಳಿದರು. ಸತ್ಯಾಸತ್ಯತೆ ರಾಜ್ಯದ ಜನರಿಗೆ ಗೊತ್ತಾಗಬಾರದೇ ಎಂದು ಪ್ರಶ್ನಿಸಿದರು.
ಇದೆಲ್ಲ ಷಡ್ಯಂತ್ರದ ಹಿಂದೆ, ಈ ಪಾತ್ರಧಾರಿಗಳ ಹಿಂದೆ ಸೂತ್ರಧಾರಿಗಳು ಸರಕಾರದ ವ್ಯವಸ್ಥೆಯಲ್ಲೇ ಇದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳ ಸುತ್ತ ಇದ್ದಾರೆ ಎಂದು ಆಕ್ಷೇಪಿಸಿದರು. ಇದು ರಾಜ್ಯದಲ್ಲಿ ಚರ್ಚೆ ಆಗುತ್ತಿದೆ. ಇದರ ಬಗ್ಗೆಯೂ ರಾಜ್ಯದ ಜನರ ಮುಂದೆ ಸತ್ಯ ಹೊರಬರಲಿ ಎಂದು ಒತ್ತಾಯಿಸಿದರು.
ಹಿಂದೂ ಭಾವನೆಗಳಿಗೆ ಧಕ್ಕೆ ತರುವ ದೊಡ್ಡ ಷಡ್ಯಂತ್ರ..
ಇದು ಚಿನ್ನಯ್ಯ, ಚೆನ್ನಯ್ಯ ಪ್ರಶ್ನೆ ಅಲ್ಲ; ಹಿಂದೂ ಭಾವನೆಗಳಿಗೆ, ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ದೊಡ್ಡ ಷಡ್ಯಂತ್ರ, ಪಿತೂರಿ ಇದರ ಹಿಂದಿದೆ. ಇದರ ಬಗ್ಗೆ ಸತ್ಯ ಹೊರಬರಲಿ. ಅವರು ಅಯೋಗ್ಯರೆಂದು 6 ತಿಂಗಳ ತನಿಖೆ ಮಾಡಿ ಎಸ್‍ಐಟಿ ಹೇಳಬೇಕಿಲ್ಲ; ದಾರಿಯಲ್ಲಿ ಹೋಗುವವರೇ ಹೇಳುತ್ತಾರೆ ಎಂದು ನುಡಿದರು. ಸರಕಾರವು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
GOOD NEWS: ರಾಜ್ಯದಲ್ಲಿ ‘ಭೂ ಪರಿವರ್ತನೆ ನಿಯಮ’ ಸರಳೀಕರಣ: 2 ಎಕರೆಗಿನ ಸಣ್ಣ ಕೈಗಾರಿಕೆಗಳಿಗೆ ‘ಕನ್ವರ್ಷನ್’ ಬೇಕಿಲ್ಲ
ಪ್ರತಿ ಶನಿವಾರ ನಾಗಮಂಗಲ, ಮಂಡ್ಯಕ್ಕೆ ಚಲುವರಾಯಸ್ವಾಮಿ ಬರೋದೇ ಕಲೆಕ್ಷನ್ ಮಾಡೋಕೆ: ಮಾಜಿ ಶಾಸಕ ಸುರೇಶ್ ಗೌಡ ಆರೋಪ








