ವಿಜಯಪುರ : ವಿಜಯಪುರದಲ್ಲಿ ಮಸೀದಿ ಬಳಿ ದಲಿತರ ಸಮುದಾಯ ಭವನ ನಿರ್ಮಾಣ ಮಾಡುವುದಕ್ಕೆ ಮುಸ್ಲಿಂ ಸಮುದಾಯದವರಿಂದ ವಿರೋಧ ವ್ಯಕ್ತವಾಗಿದ್ದು, ಕೆಲಕಾಲ ಎರಡೂ ಸಮುದಾಯದವರ ವಾಗ್ವಾದದಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.ವಿಜಯಪುರ ನಗರದ ಇಕ್ಲಾಸಖಾನ್ ಮಸೀದಿ ಬಳಿಯ ಜಾಗದಲ್ಲಿ ದಲಿತ ಸಮುದಾಯದ ಯುವಕರು ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕೆ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತ ಪಡೆಸಿದ್ದಾರೆ.
ವಿಜಯಪುರ ನಗರದಲ್ಲಿ ಸರ್ಕಾರದ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವುದನ್ನು ತಡೆಯುವುದಕ್ಕೆ ನೀವ್ಯಾರು? ಇಲ್ಲಿ ನಾವು ಸಮುದಾಯ ಭವನ ನಿರ್ಮಿಸುತ್ತೇವೆ ಎಂದು ದಲಿತ ಸಮುದಾಯದ ಮುಖಂಡರು ಹೇಳಿದ್ದಾರೆ. ಮಸೀದಿ ಭಾರತೀಯ ಪುರಾತತ್ವ ಇಲಾಖಾ ವ್ಯಾಪ್ತಿಯ ಸಂರಕ್ಷಿತ ವಲಯದಲ್ಲಿದ್ದು ಇಲ್ಲಿ ಸಮುದಾಯ ಭವನ ನಿರ್ಮಾಣ ಮಾಡದಂತೆ ಮುಸ್ಲಿಂ ಮುಖಂಡರು ವಿರೋಧಿಸಿದ್ದಾರೆ. ಇದರಿಂದಾಗಿ ಎರಡು ಸಮುದಾಯಗಳ ಯುವಕರು ಜಮಾಯಿಸಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.
ಆದರೆ, ಮುಸ್ಲಿಂ ಸಮುದಾಯದ ಮುಖಂಡರು ಬಂದು ವಿಜಯಪುರದ ಎಲ್ಲ ಮಸೀದಿಗಳ ಬಳಿಯೂ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕೆಂದರೆ ನೀವು ಸರ್ಕಾರದ ಅನುಮತಿ ಮಾತ್ರವಲ್ಲ, ಭಾರತೀಯ ಪುರಾತತ್ವ ಇಲಾಖೆ ಅನುಮತಿ ಪಡೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಈ ವೇಳೆ ಎರಡೂ ಸಮುದಾಯದವರ ನಡುವೆ ವಾಗ್ದಾದ ಜೋರಾಗಿದೆ.
ಸ್ಥಳಕ್ಕೆ ಕೂಡಲೇ ಪೊಲೀಸರು ಆಗಮಿಸಿದ್ದಾರೆ. ಪೊಲೀಸ್ ಕಾನ್ಸ್‌ಸ್ಟೇಬಲ್‌ಗಳ ಬಂದರೂ ಅವರ ಮಾತನ್ನು ಕೇಳದೇ ಎರಡೂ ಸಮುದಾಯದ ಮುಖಂಡರು ವಾಗ್ವಾದ ಮುಂದುವರೆಸಿದ್ದರು. ಕೂಡಲೇ ಕೆಲವು ಪೊಲೀಸ್ ಸಿಬ್ವಂದಿಯೊಂದಿಗೆ ಸ್ಥಳಕ್ಕೆ ಬಂದ ಗೋಳಗುಮ್ಮಟ ಪೊಲೀಸ್ ಠಾಣೆಯ ಸಿಪಿಐ ಮಲ್ಲಯ್ಯ ಮಠಪತಿ ಅವರು ಎರಡು ಕಡೆಗಳ ಮುಖಂಡರನ್ನ ಸಮಾಧಾನ ಪಡೆಸಿದ್ದಾರೆ. ಅಲ್ಲದೆ ಸಂಬಂಧಿಸಿದ ದಾಖಲಾತಿಗಳನ್ನ ತರುವಂತೆ ವಾತಾವರಣ ತಿಳಿಗೊಳಿಸಿದ್ದಾರೆ.