ವಿಜಯಪುರ : ಒಂದು ಕಡೆ ಶಕ್ತಿ ಯೋಜನೆಯಿಂದ ಸಾರಿಗೆ ನೌಕರರಿಗೆ ವೇತನ ಸಿಗುತ್ತಿಲ್ಲ ಎಂದು ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ಹೇಳುತ್ತಿದ್ದರೆ, ಇನ್ನೊಂದು ಕಡೆ ಇದೇ ಒಂದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರಿಗೆ ಉಪಯೋಗವಾಗಿದೆ. ಇದೀಗ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಮಹಿಳೆಯೊಬ್ಬರು 5 ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ಬಂದಂತಹ ಹಣದಿಂದ ಇಡೀ ಗ್ರಾಮಕ್ಕೆ ಹೋಳಿಗೆ ಊಟ ಆಗಿಸಿರುವ ಘಟನೆ ವರದಿಯಾಗಿದೆ.
ಹೌದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಂಬಾ ಸಮೀಪದ ಗೂಗಿಹಾಳ ಗ್ರಾಮದ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಾಬೂಬಿ ಅಬ್ಬಾಸಲಿ ಚೌಧರಿ ಅವರು ಗೃಹಲಕ್ಷ್ಮಿ ಹಣ ಉಳಿಸಿ, ಸಿಂದಗಿ ಶಾಸಕ ಅಶೋಕ ಮನಗೂಳಿ ಮತ್ತು ಸಮಸ್ತ ಗ್ರಾಮಸ್ಥರಿಗೆ ಸೋಮವಾರ ಹೋಳಿಗೆ ಊಟ ಮಾಡಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಅಶೋಕ್ ಮನಗೂಳಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತು ಇದನ್ನು ಬಿಜೆಪಿಯವರು ವಿರೋಧಿಸಿ, ಈ ರೀತಿ ಗ್ಯಾರಂಟಿಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡಿದರು. ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎನ್ನುವ ವಿಪಕ್ಷದವರಿಗೆ ಸೂಕ್ತ ಉತ್ತರ ನೀಡಿ, ಸ್ವಾವಲಂಬಿ ಕರ್ನಾಟಕ ರೂಪುಗೊಳ್ಳುತ್ತಿದೆ ಎಂದರು.