ವಿಜಯಪುರ : ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ದೂರಿನ ಮೇರೆಗೆ ಇದೀಗ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ನನ್ನು ಅರೆಸ್ಟ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದೆ.
ಬಂಧಿತ ಪ್ರಿನ್ಸಿಪಾಲ್ ನನ್ನು ಸಚಿನ್ ಕುಮಾರ್ ಪಾಟೀಲ್ ಎಂದು ತಿಳಿದುಬಂದಿದೆ.ಕಳೆದ ಜುಲೈನಲ್ಲಿ ಈ ಕೃತ್ಯ ನಡೆದಿದೆ. ಇದೀಗ ಜನವರಿ 2ರಂದು ವಿದ್ಯಾರ್ಥಿನಿಯರು ಮನಗೂಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಪ್ರಾಂಶುಪಾಲ ವಿದ್ಯಾರ್ಥಿನಿಯರ ಮೈ-ಕೈ ಮುಟ್ಟುವುದು ಹಾಗೂ ಅಪ್ಪಿಕೊಳ್ಳುತ್ತಿದ್ದ. ಪ್ರತಿರೋಧಿಸಿದರೆ, ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಚಿನ್ ಪಾಟೀಲ್ ಕಿರುಕುಳಕ್ಕೆ ವಿದ್ಯಾರ್ಥಿನಿ ಒಬ್ಬಳು ಅರ್ಧಕ್ಕೆ ಕಾಲೇಜು ಬಿಟ್ಟಿದ್ದಳು. ಅಲ್ಲದೆ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಕೂಡ ಫೇಲ್ ಮಾಡಲಾಗಿತ್ತು ಇದನ್ನು ಪ್ರಶ್ನಿಸಿದಾಗ ನನಗೆ ಸಹಕರಿಸಿದರೆ ಟಾಪರ್ ಮಾಡುತ್ತೇನೆ ಎಂದು ಹೇಳಿದ್ದನಂತೆ.
ಇನ್ನು ಇನ್ನೊರ್ವ ವಿದ್ಯಾರ್ಥಿನಿಗೆ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಹೋದಾಗಲೂ ಕಿರುಕುಳ ನೀಡಲಾಗಿತ್ತು ಎಂದು ದೂರಲಾಗಿದೆ. ಈ ದೂರಿನ ಆಧಾರದಡಿ ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.