ವಿಜಯನಗರ : ಕಳೆದ ಎರಡು ದಿನಗಳ ಹಿಂದೆ ಇಡೀ ರಾಜ್ಯದಲ್ಲಿ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಅತ್ಯಂತ ಸಡಗರದಿಂದ ಶಾಲೆಗೆ ಆಗಮಿಸಿದ್ದಾರೆ.ಆದರೆ ವಿಜಯನಗರದಲ್ಲಿ ಒಂದು ಘೋರ ದುರಂತ ಸಂಭವಿಸಿದ್ದು ಬೆಳಿಗ್ಗೆ ಶಾಲೆಗೆ ತೆರಳಿದ ಬಾಲಕಿ ವಿದ್ಯುತ್ ಕಂಬವನ್ನು ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾತ್ರಿಕಾಯನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಹೌದು ಮೃತಪಟ್ಟ ಬಾಲಕಿ ಕಾತ್ರಿಕಾಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಶಾಲೆಗೆ ಹೋಗಿದ್ದ ಬಾಲಕಿಯು, ಗ್ರಾಮದಲ್ಲಿ ಮಳೆ ಬಂದಿರೋ ಹಿನ್ನೆಲೆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿದೆ. ಬಾಲಕಿ ವಿದ್ಯುತ್ ಕಂಬ ಸ್ಪರ್ಶಿಸಿದ್ದರಿಂದ ಶಾಕ್ ಹೊಡೆದಿದೆ.ಕಣ್ಮುಂದೆ ಶಾಲೆಗೆ ಹೋಗಿದ್ದ ಬಾಲಕಿ ಕೆಲವೇ ಸಮಯಕ್ಕೆ ದುರ್ಮರಣಕ್ಕೀಡಾದದ್ದು ಕೇಳಿ ಕುಟುಂಬಸ್ಥರು ಸಹಜವಾಗಿ ಅಘಾತಕ್ಕೆ ಒಳಗಾಗಿದ್ದಾರೆ.
ಗ್ರಾಮದಲ್ಲಿ ವಿದ್ಯುತ್ ಕಂಬಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾದ ಕಂಬಗಳನ್ನ ಹಾಕದೇ ಬೇಕಾಬಿಟ್ಟಿ ಹಾಕಿರುವ ವಿದ್ಯುತ್ ಕಂಬಗಳಿಂದ ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕಿಯ ಈ ಒಂದು ಸಾವಿಗೆ ಹೊಣೆ ಯಾರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಕಾನಾಹೊಸಳ್ಳಿ ಪಿಎಸ್ಐ ಎರಿಯಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕಾನಾಹೊಸಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.