ಬೆಂಗಳೂರು : ಇಂದಿನ ಆಧುನಿಕ ಹಾಗೂ ತಂತ್ರಜ್ಞಾನದ ಯುಗದಲ್ಲಿ ಸಾಮಾನ್ಯವಾಗಿ ಹೈಸ್ಕೂಲಿನಲ್ಲೆ ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್, ಕಂಪ್ಯೂಟರ್ ಅಂತ ಅವರ ಓದಿಗಾಗಿ ಏನೆಲ್ಲಾ ಮಾಡುತ್ತಾರೆ. ಕೆಲವು ಮಕ್ಕಳು ಅದರಿಂದ ಸದುಪಯೋಗ ಪಡೆದುಕೊಂಡರೆ ಇನ್ನೂ ಕೆಲವರು ಅದರಿಂದ ಹಾಳಾಗುತ್ತಾರೆ. ಇದೀಗ ಅಂತರ್ಜಾಲದ ಮೂಲಕ ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಹೌದು ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆ ಮಾಡಿದ ಆರೋಪದಲ್ಲಿ ದಾಖಲಾದ ಪ್ರಕರಣ ರದ್ದು ಕೋರಿ ಹೊಸಕೋಟೆಯ ಎನ್. ಇನಾಯತುಲ್ಲಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ಅರ್ಜಿದಾರ ಇನಾಯತುಲ್ಲ ಅವರು 2023ರ ಮಾರ್ಚ್ 23ರಂದು ಮಧ್ಯಾಹ್ನ 3.30ರಿಂದ 4.40ರ ಅವಧಿಯಲ್ಲಿ ತನ್ನ ಮೊಬೈಲ್ ಮೂಲಕ ಮಕ್ಕಳ ಆಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡಿದ್ದರು. ಈ ಸಂಬಂಧ ಕೇಂದ್ರ ಸರ್ಕಾರ ಜಾರಿ ಮಾಡಿರುವ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪ್ರಾರಂಭಿಸಿರುವ ಪೋರ್ಟಲ್ ಮೂಲಕ ಮಾಹಿತಿ ಪಡೆದಿದ್ದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿದ ಮಾಹಿತಿಯಂತೆ ಬೆಂಗಳೂರು ನಗರ ಸಿಐಡಿ ಘಟಕ ಬೆಂಗಳೂರು ಸೈಬರ್ ಕ್ರೈಮ್ ಠಾಣೆಗೆ ವರದಿಯೊಂದನ್ನು ರವಾನಿಸಿತ್ತು.
ಈ ವರದಿಯನ್ನು ಪರಿಶೀಲಿಸಿ ಮಕ್ಕಳ ಆಶ್ಲೀಲ ವಿಡಿಯೋ ಪರಿಶೀಲಿಸಿದ್ದ ವ್ಯಕ್ತಿಯನ್ನು ಹೊಸಕೋಟೆ ಮೂಲಕ ಇನಾಯತುಲ್ಲ ಎಂಬುದಾಗಿ ಪತ್ತೆ ಹಚ್ಚಿ ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67ಬಿ ಅಡಿ ಘಟನೆ ನಡೆದ ಎರಡು ತಿಂಗಳ ಬಳಿಕ, ಅಂದರೆ 2023ರ ಮೇ 3ರಂದು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರು ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಮಕ್ಕಳ ಆಶ್ಲೀಲ ಚಿತ್ರಗಳನ್ನು ವೀಕ್ಷಣೆಯ ವ್ಯಸನಿಯಾಗಿದ್ದಾರೆ. ಆದರೆ, ಯಾವುದೇ ವಿಡಿಯೋವನ್ನು ಸಿದ್ಧಪಡಿಸಿಲ್ಲ ಮತ್ತು ಯಾರೊಂದಿಗೂ ಹಂಚಿಕೆ ಮಾಡಿಲ್ಲ. ಹೀಗಾಗಿ, ಪ್ರಕರಣ ರದ್ದು ಮಾಡಬೇಕು ಎಂದು ಕೋರಿದ್ದರು.
ಆದರೆ, ಅರ್ಜಿದಾರರು ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಿಸುವ ದಾಸನಾಗಿದ್ದಾರೆ. ಅವರು ಆಶ್ಲೀಲ ವಿಡಿಯೋಗಳನ್ನು ನೋಡುತ್ತಾರೆ. ಈ ಘಟನೆಯಿಂದ ಯಾವುದೇ ಅಪರಾಧ ಕೃತ್ಯ ನಡೆದಿಲ್ಲ. ಹೀಗಾಗಿ, ಆಕಸ್ಮಿಕವಾಗಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅದನ್ನು ಮುಂದುವರೆಸಿದಲ್ಲಿ ಕಾನೂನಿನ ದುರ್ಬಳಕೆಯಾಗಲಿದೆ ಎಂದು ಪೀಠ ತಿಳಿಸಿದೆ.